ಕಳಚೆಯ ಸಹ್ಯಾದ್ರಿ ಸೊಸೈಟಿ ಬಗ್ಗೆ ದುರುದ್ದೇಶದಿಂದ ಅಪಪ್ರಚಾರ

09 ylp umesh bhagwat
Published on

ಯಲ್ಲಾಪುರ: ಸಾಲ ವಸೂಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಘದ ಬಗ್ಗೆ ದುರುದ್ದೇಶದಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದಲ್ಲಿ ಮಹಮ್ಮದ್ ರಫೀಕ್ ಮೋದಿನ್ ಶಾ ಅತ್ತಾರ ಎಂಬುವವರು 2020ರಲ್ಲಿ 60 ಕಂತುಗಳ ವಾಯಿದೆಯಡಿ 19.55 ಲಕ್ಷ ರೂ. ಸಾಲ ಮಾಡಿ ಲಾರಿ ಖರೀದಿಸಿದ್ದರು. ಕೇವಲ 6 ಕಂತು ತುಂಬಿದ ಕಾರಣಕ್ಕೆ ಅವರಿಗೆ ನೋಟಿಸ್ ನೀಡಲಾಗಿತ್ತು. ಅದಕ್ಕೆ ಉತ್ತರಿಸದೆ, ಸಾಲವನ್ನೂ ತುಂಬದಿರುವುದರಿಂದ ಲಾರಿಯನ್ನು ಜಪ್ತು ಮಾಡಿಕೊಳ್ಳುವಂತೆ ಕಳೆದ ಜುಲೈನಲ್ಲಿ ಸೀಜರ್ಸ್‌ಗೆ ಆದೇಶಿಸಲಾಗಿತ್ತು. ಆದರೆ, ಅತ್ತಾರ ಅವರು ಲಾರಿಯನ್ನು ಬೇರೆಯವರಿಗೆ ಮಾರಿದ್ದಾರೆಂಬ ವಿಷಯ ತಿಳಿಯಿತು. ಇದರಿಂದ ವಾಹನವನ್ನು ಸೀಜ್ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ಡಿಸೆಂಬರ್ 23ರಂದು ಹುಬ್ಬಳ್ಳಿಯ ಗ್ಯಾರೇಜೊಂದರಲ್ಲಿ ಲಾರಿ ಇರುವ ವಿಷಯ ತಿಳಿದು ಅಲ್ಲಿಗೆ ಹೋಗಿ, ಅತ್ತಾರ ಎದುರಲ್ಲೇ, ಅವರ ಒಪ್ಪಿಗೆಯ ಮೇರೆಗೆ ಲಾರಿಯನ್ನು ಸೀಜ್ ಮಾಡಿದ್ದೇವೆ. ಗ್ಯಾರೇಜಿನವರಿಗೆ ಅತ್ತಾರ ಕೊಡಬೇಕಿದ್ದ 69,650 ರೂ.ಗಳನ್ನೂ ನಮ್ಮ ಸಂಘವೇ ಪಾವತಿಸಿದೆ. ಸೀಜಿಂಗ್ ಬಾಬ್ತು ನೀಡಲು ಅತ್ತಾರ ಅವರೇ ಒಪ್ಪಿದ್ದು, ವಾಹನವನ್ನು ಸಂಘದ ವಶಕ್ಕೆ ನೀಡಿ, ಅದನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಸಾಲ ಮರುಪಾವತಿ ಮಾಡುತ್ತೇನೆ ಎಂದು ಲಿಖಿತವಾಗಿ ಅತ್ತಾರ ಬರೆದುಕೊಟ್ಟಿದ್ದಾರೆ. ಆ ವಾಹನವನ್ನು ಸೀಜ್ ಮಾಡಿ ಸಂಘದ ಸಿಬ್ಬಂದಿಯೊಬ್ಬರ ಮನೆಯ ಬಳಿ ಇಡಲಾಗಿದೆ ಎಂದು ವಿವರಿಸಿದರು.

ನಂತರ ಕೆಲ ದಿನಗಳಲ್ಲಿ ಅತ್ತಾರ, ನಮ್ಮ ಸಂಘದ ಸಿಬ್ಬಂದಿಯ ಹೆಸರನ್ನು ಸೇರಿಸಿ ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ನೀಡಿದ ನೋಟಿಸ್‌ಗೆ ದಾಖಲೆ ಸಹಿತ ಉತ್ತರ ನೀಡಿದ್ದೇವೆ. ಇಷ್ಟಕ್ಕೇ ನಿಲ್ಲದೆ, ಲಾರಿ ಮಾಲೀಕರ ಸಂಘಕ್ಕೆ ತಪ್ಪು ಮಾಹಿತಿ ನೀಡಿ, ಸುದ್ದಿಗೋಷ್ಠಿ ನಡೆಸಿ ನಮ್ಮ ಸಂಘದ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಾರೆ. ಸಂಘಕ್ಕೆ ಮಾತ್ರವಲ್ಲ, ಯಲ್ಲಾಪುರ ಪೊಲೀಸರ ಬಗೆಗೂ ಅಪಪ್ರಚಾರ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ನಮ್ಮ ಸಂಘ ಮಾತ್ರವಲ್ಲ, ಎಲ್ಲ ಸಂಘ, ಬ್ಯಾಂಕ್‌ಗಳಿಗೆ ವಂಚನೆ ಮಾಡುವ ಇಂಥವರ ವಿರುದ್ಧ ಸಂಘಟಿತ ಹೋರಾಟ ಅಗತ್ಯ. ಜಿಲ್ಲೆಯ ಎಲ್ಲ ಬ್ಯಾಂಕ್, ಸೊಸೈಟಿಗಳು ಸಾಲ ವಿತರಣೆ ಹಾಗೂ ವಸೂಲಿ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

ಸಂಘದ ನಿರ್ದೇಶಕ ಶ್ರೀಕಾಂತ ಹೆಬ್ಬಾರ, ಮುಖ್ಯ ಕಾರ್ಯನಿರ್ವಾಹಕ ಡಿ.ಎಂ. ಹೆಗಡೆ, ಶಾಖಾ ವ್ಯವಸ್ಥಾಪಕ ಪರಮೇಶ್ವರ ಕೋಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net