ಜಿಲ್ಲಾಧಿಕಾರಿ ವಿರುದ್ಧ ಶಾಸಕ ರೇವಣ್ಣ ಕಿಡಿ

ಜಿಲ್ಲಾಧಿಕಾರಿ ವಿರುದ್ಧ ಶಾಸಕ ರೇವಣ್ಣ ಕಿಡಿ
Published on

ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಅಧಿಕಾರಿಗಳನ್ನು ಹೆದರಿಸಿ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಉಸ್ತುವಾರಿ ಸಚಿವರು ಅವರಿಗೆ ಬುದ್ಧಿ ಹೇಳದಿದ್ದರೆ ಜಿಲ್ಲೆಯ ಜನರೇ ಉತ್ತರ ಕೊಡುತ್ತಾರೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಹಾಸನಾಂಬ ದರ್ಶನಕ್ಕೆ ನಾನು ಬಂದಾಗ ಎಡಿಆರ್‌ಎಲ್ ಸಂಶುದ್ದಿನ್ ನನ್ನ ಜತೆ ಕಾಲ್ನಡಿಗೆಯಲ್ಲಿ ಬಂದರೆಂಬ ಕಾರಣಕ್ಕೆ ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ. ಜನಪ್ರತಿನಿಧಿ ಜತೆಗೆ ಅಧಿಕಾರಿಗಳು ಮಾತನಾಡಬಾರದಾ? ಶಾಸಕನಾಗಿ ಅವರೊಟ್ಟಿಗೆ ಮಾತನಾಡುವ ಅಧಿಕಾರ ನನಗಿಲ್ಲವೇ? ಜಿಲ್ಲಾಧಿಕಾರಿಯ ಸರ್ವಾಧಿಕಾರಿ ನಡೆ ಒಳ್ಳೆಯದಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಸ್ಲಿಂ ಸಮುದಾಯದವರು ವೋಟು ಹಾಕಿದ್ದರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್‌ಗೆ 136 ಸ್ಥಾನ ದೊರೆತಿದೆ. ಆ ಸಮುದಾಯದ ಅಧಿಕಾರಿಗಳಿಗೆ ಭದ್ರತೆ ಇಲ್ಲವಾಗಿದೆ. ಮುಸ್ಲಿಮರಿಗೆ ಬಿಜೆಪಿ ಅವಧಿಯಲ್ಲೂ ನೆಮ್ಮದಿ ಇಲ್ಲ. ಕಾಂಗ್ರೆಸ್ ಆಡಳಿತದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

ಅಧಿಕಾರಿಗಳಿಗೆ ಭಯ: ಮಹಾನಗರ ಪಾಲಿಕೆ ಆಯುಕ್ತ ಆರ್.ಕೃಷ್ಣಮೂರ್ತಿ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಲು ಕಾರಣ ಏನೆಂಬುದನ್ನು ಸಾರ್ವಜನಿಕವಾಗಿ ಹೇಳಬೇಕು. 15 ದಿನಗಳಿಂದ ಬಯೊಮೆಟ್ರಿಕ್ ಕೊಡಲು ಆಗದೆ ಇತರ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಸಮಸ್ಯೆಗಳು ಮಿತಿ ಮೀರಿವೆ. ಜಿಲ್ಲಾಧಿಕಾರಿಗೆ ಹೆದರಿ ಅಪರ ಜಿಲ್ಲಾಧಿಕಾರಿ ಹುದ್ದೆಗೆ ಯಾರೂ ಬರುತ್ತಿಲ್ಲ. ಎಡಿಸಿ ಆಗಿರುವ ಮಂಜುನಾಥ್ ಒಬ್ಬರೇ 14 ಹುದ್ದೆ ನಿಬಾಯಿಸಬೇಕಾಗಿದೆ. ಇವರಿಗೆ ಹೆದರಿ ಉಪವಿಭಾಗಾಧಿಕಾರಿ ಮಾರುತಿ ವರ್ಗ ಮಾಡಿಸಿಕೊಂಡು ಹೋದರು. ಅಬಕಾರಿ ಜಿಲ್ಲಾಧಿಕಾರಿ ಸಹ ನಿರ್ಗಮಿಸಿದರು. ಜಿಲ್ಲೆಗೆ ಬರಲು ಅಧಿಕಾರಿಗಳು ಭಯಪಡುತ್ತಿದ್ದಾರೆ. ಜಿಲ್ಲಾಧಿಕಾರಿ ದುರಹಂಕಾರ ವರ್ತನೆ ಮಿತಿ ಮೀರಿದೆ. ಬೈಕ್, ಸೈಕಲ್‌ನಲ್ಲಿ ನಗರ ಸುತ್ತುವ ಬದಲು ಸರ್ಕಾರ ಕೊಟ್ಟಿರುವ ಕಾರಿನಲ್ಲಿ ಸುತ್ತಾಡಿ ಜನರ ಸಮಸ್ಯೆಗೆ ಕಿವಿಯಾಗಲಿ ಎಂದರು.

ಅನ್ನದಾತರು ಕಂಗೆಟ್ಟಿದ್ದಾರೆ: ಅತಿಯಾದ ಮಳೆಯಿಂದ ಬೆಳೆ ಹಾಳಾಗಿದೆ. ಜಮೀನಿನಲ್ಲಿ ನೀರು ನಿಂತು ಅನ್ನದಾತರು ಕಂಗೆಟ್ಟಿದ್ದಾರೆ. ಆದರೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಇದುವರೆಗೆ ವರದಿ ಸಲ್ಲಿಕೆಯಾಗಿಲ್ಲ. ರಸ್ತೆಗಳೆಲ್ಲ ಗುಂಡಿ ಬಿದ್ದು ನಿತ್ಯ ಸಾವು, ನೋವು ಸಂಭವಿಸುತ್ತಿವೆ. ಜಿಲ್ಲಾಧಿಕಾರಿ ಅವರು ಏನು ಮಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಇನ್ನು ಮುಂದೆಯೂ ದುರ್ವರ್ತನೆ ಮುಂದುವರಿಸಿದರೆ ಒಂದಲ್ಲ ಒಂದು ದಿನ ನೀವು ಸಿಕ್ಕಿಬೀಳುತ್ತಿರಿ. ಜನರೇ ನಿಮ್ಮ ದುರಂಹಕಾರ ಕಡಿಮೆ ಮಾಡಿಸುತ್ತಾರೆಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net