

ಚಿತ್ರದುರ್ಗ: ಕರೊನಾ ಎರಡನೆಯ ಅಲೆಯ ಹೊಡೆತಕ್ಕೆ ದಿನವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೋಂಕಿತರಾಗುತ್ತಿರುವುದಲ್ಲದೆ, ದಿನವೊಂದರಲ್ಲೇ ನೂರಾರು ಮಂದಿ ಕೋವಿಡ್ ಸೋಂಕಿನಿಂದಾಗಿ ಮೃತಪಡುತ್ತಿದ್ದರು, ರಾಜ್ಯದಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ ಈಗಾಗಲೇ 20 ಸಾವಿರಕ್ಕೂ ಹೆಚ್ಚಾಗಿದೆ.
ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ಆಡಳಿತಾರೂಢ ಬಿಜೆಪಿಯ ಶಾಸಕರೊಬ್ಬರು 'ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲ್ಲ' ಎಂಬುದಾಗಿ ಹಠ ತೊಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳೆಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಚಂದ್ರಪ್ಪ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.
ಕ್ಷೇತ್ರದ ಬಿ.ದುರ್ಗದ ನೂತನ ರೆಸಿಡೆನ್ಷಿಯಲ್ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡುವ ಕುರಿತ ಮಾತುಕತೆ ವೇಳೆ ಚಂದ್ರಪ್ಪ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾ ಆರೋಗ್ಯ ಅಧಿಕಾರಿ ಫಾಲಾಕ್ಷಯ್ಯ ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ಸಿಟ್ಟಾದ ಶಾಸಕರು ಅದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಕೆಎಸ್ಆರ್ಟಿಸಿ ಅಧ್ಯಕ್ಷರೂ ಆಗಿರುವ ಶಾಸಕ ಚಂದ್ರಪ್ಪ, ಸಾಯುವವನು ಎಲ್ಲಿ ಬೇಕಾದರೂ ಸಾಯಲಿ. ನಾನು ಇಲ್ಲಿ ಕೋವಿಡ್ ಸೆಂಟರ್ ಮಾಡಲ್ಲ. ನನಗೆ ಅದರ ಅವಶ್ಯಕತೆ ಇಲ್ಲ, ಇಲ್ಲಿ ಆಸ್ಪತ್ರೆ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.