ಶಾಸಕ ಕೆ.ಎಂ.ಉದಯ್‌ಗೆ ‘ಮೌನ ಸಾಧಕ’ ಪ್ರಶಸ್ತಿ

Mla-Kadaluru-Uday
Published on

ಕೆ.ಎಂ.ದೊಡ್ಡಿ: ಸಂವಿಧಾನ ದಿನಾಚರಣೆ ಅಂಗವಾಗಿ ಜ.26 ರಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ. ಉದಯ್ ಅವರಿಗೆ ಮೌನಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಡಾಕ್ಟರ್ ಜೈ ಭೀಮ್ ದಲಿತ ಜಾಗೃತಿ ಸಮಿತಿಯ ಅಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ತಿಳಿಸಿದ್ದಾರೆ.

ಡಾಕ್ಟರ್ ಜೈ ಭೀಮ್ ದಲಿತ ಜಾಗೃತಿ ಸಮಿತಿ, ಸಿ.ಎ.ಕೆರೆ ಹೋಬಳಿ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವು ಅಂದು ಮಧ್ಯಾಹ್ನ 3 ಗಂಟೆಗೆ ವಿಶಿಷ್ಟವಾಗಿ ಜರುಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಪವಾಡ ರಹಸ್ಯ ಬಯಲು ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಅಭಿನಂದನೆ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ. ಉದಯ್ ಅವರ ಸಾಧನೆಯನ್ನು ಗುರುತಿಸಿ ಮೌನ ಸಾಧಕ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಕೆಲಸಗಳು ಮಾತನಾಡಬೇಕೆ ಹೊರತು ಕೇವಲ ಮಾತೆ ಕೆಲಸವಾಗಬಾರದು ಎಂಬಂತೆ ಶಾಸಕರು ಯಾವುದೇ ಪ್ರಚಾರಕ್ಕೆ ಆಸ್ಪದ ನೀಡದೇ ತಮ್ಮ ಕೆಲಸಗಳ ಬಗ್ಗೆ ಹೆಚ್ಚು ಮಾತನಾಡದೆ ಮೌನವಾಗಿದ್ದುಕೊಂಡೇ ಕ್ಷೇತ್ರ ಅಭಿವೃದ್ಧಿಯ ಪ್ರಗತಿಗೆ, ತನ್ನದೇ ಆದಂತಹ ಕೊಡುಗೆ ನೀಡುತ್ತಿರುವುದನ್ನು ಕ್ಷೇತ್ರದ ಪ್ರಜ್ಞಾವಂತ ನಾಗರಿಕರು ಗಮನಿಸುತ್ತಿದ್ದು, ಇದಕ್ಕೆ ಪೂರಕವಾಗಿ ನಮ್ಮ ಸಮಾಜ ಸೇವಾ ಸಂಸ್ಥೆಗಳ ವತಿಯಿಂದ ಮೌನ ಸಾಧಕ ಎಂಬ ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸುತ್ತಿದ್ದೇವೆ ಎಂದರು.

ಶಾಸಕ ಕೆ.ಎಂ. ಉದಯ್ ಅವರು ಕ್ಷೇತ್ರಾದ್ಯಂತ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಪ್ರೋತ್ಸಾಹಿಸಲು ತೀರ್ಮಾನಿಸಿದ್ದು ಅವರ ಕೆಲಸ ಕಾರ್ಯಗಳಿಗೆ ಇನ್ನು ಹೆಚ್ಚಿನ ಸ್ಫೂರ್ತಿ ತುಂಬುವ ಕೆಲಸ ಈ ಕಾರ್ಯಕ್ರಮದಲ್ಲಿ ಅವರಿಗೆ ಲಭಿಸಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಖ್ಯಾತ ಕುಂಡಿ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಡಾ.ಟಿ.ಎಚ್.ಅಂಜನಪ್ಪ ಅವರು ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು.

ಬಹು ಮುಖ್ಯವಾಗಿ ಮೂಢನಂಬಿಕೆಗಳ ಬಗ್ಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ, ಪವಾಡ ಬಯಲು ಬಂಜಕ ಖ್ಯಾತಿಯ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅವರು ಪವಾಡ ರಹಸ್ಯ ಬಯಲು ಪ್ರದರ್ಶನ ನಡೆಸಿಕೊಡಲಿದ್ದು, ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಲಾಗುವುದು ಎಂದರು. ಗೌರವಾಧ್ಯಕ್ಷ ಎಸ್. ಮಹದೇವಯ್ಯ, ವಂಸಂತಮ್ಮ, ಮುಡಿನಹಳ್ಳಿ ತಿಮ್ಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net