

ರಾಮನಗರ : ರೈತರ ಜಮೀನನ್ನು ಕಬಳಿಕೆ ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಕನಕಪುರ ತಾಲೂಕಿನ ಹೊಂಗಾಣಿದೊಡ್ಡಿಯಿಂದ ರಾಮನಗರದವರೆಗೆ ಬಿಜೆಪಿ - ಜೆಡಿಎಸ್ ಜಂಟಿಯಾಗಿ ಬೃಹತ್ ಪಾದಯಾತ್ರೆ ನಡೆಸಲಿವೆೆ ಎಂದು ಬಿಜೆಪಿ ಮುಖಂಡ ಗೌತಮ್‌ಗೌಡ ತಿಳಿಸಿದರು.
ರಾಮನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಕೂಡಲೇ ರಾಜೀನಾಮೆ ಸಲ್ಲಿಸಿ, ತನಿಖೆ ಎದುರಿಸಬೇಕು. ರೈತರಿಗೆ ವಾಪಸ್ ಭೂಮಿ ನೀಡಬೇಕು. ಶಾಸಕರು ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಇದು ಕಾಂಗ್ರೆಸ್ ತಲೆ ತಗ್ಗಿಸಬೇಕಾದ ವಿಷಯ ಎಂದರು.
ತಮ್ಮದೆ ಪಕ್ಷದ ಯೋಜನೆಯ ಉಳುವವನೇ ಭೂಮಿಯ ಒಡೆಯ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಕನಕಪುರ, ಹಾರೋಹಳ್ಳಿಯಲ್ಲಿ ಟ್ರಿಬ್ಯುನಲ್ ರಚನೆ ಮಾಡದೇ ರಿಪಬ್ಲಿಕ್ ಕನಕಪುರ ಮಾಡಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗಲು ಬಿಡೋದಿಲ್ಲ ಎಂದರು.
30 ವರ್ಷದ ಹಿಂದೆಯೇ ರೈತರಿಗೆ ಭೂಮಿ ಮಂಜೂರಾಗಿದೆ. ಕಡಿಮೆ ಪ್ರಮಾಣದ ಭೂಮಿ ಮಂಜೂರು ಮಾಡಿದ್ದಾರೆ ಎಂದು ಹಕ್ಕುಪತ್ರ ತಿರಸ್ಕರಿಸಿ, ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈಗ ಅದೇ ಹಳೆಯ ಹಕ್ಕುಪತ್ರವನ್ನು ನಾವು ವಿತರಿಸುತ್ತಿದ್ದೇವೆ ಎಂದು ಜನರ ದಿಕ್ಕುತಪ್ಪಿಸುವ ಕೆಲಸವನ್ನು ಇಕ್ಬಾಲ್ ಹುಸೇನ್ ಮಾಡುತ್ತಿದ್ದಾರೆ. ಕಾಯ್ದೆ ನಿಯಮ ಗಾಳಿಗೆ ತೂರಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಭೂಮಿ ಖರೀದಿಸಿದ್ದಾರೆ. ಅಧಿಕಾರಿಗಳು ಜನರ ಪರ ಕೆಲಸ ಮಾಡಬೇಕೆ ಹೊರತು, ಜನಪ್ರತಿನಿಧಿಗಳ ಪರ ಅಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲೂಕು ಅಧ್ಯಕ್ಷ ಪಿ.ಎಸ್. ಜಗದೀಶ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಪುಷ್ಪಲತಾ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಸುರೇಶ್, ಶಿವಾನಂದ, ರುದ್ರದೇವರು, ಕಿಶನ್, ನಾಗೇಶ್, ಚೇತನ್, ಚಂದನ್ ಇದ್ದರು.
ಶಾಸಕ ಇಕ್ಬಾಲ್ ಹುಸೇನ್ ಹೊಂಗಾಣಿದೊಡ್ಡಿ ಭೂಮಿ ಖರೀದಿ, ಹಣದ ಬಗ್ಗೆ ಇಡಿ, ಐಟಿಗೆ ದೂರು ನೀಡುತ್ತೇವೆ. ಜತೆಗೆ ಭೂಮಿ ಖರೀದಿಯಲ್ಲಿ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಪ್ರಭಾವಿ ಶಾಸಕರಾಗಿರುವ ಕಾರಣ ಪ್ರಕರಣದ ತನಿಖೆಯ ದಿಕ್ಕು ತಪ್ಪದಿರಲು ಇಡೀ ಪ್ರಕರಣವನ್ನು ಇಡಿ ಅಥವಾ ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತೇವೆ.ಗೌತಮ್‌ಗೌಡ, ಬಿಜೆಪಿ ಮುಖಂಡ, ರಾಮನಗರ