ತಾಲೂಕು ಕಚೇರಿಯಲ್ಲಿ ಪೂಂಜ ಪರಿಶೀಲನೆ: ಸಾವಿರಾರು ಕಡತಗಳು ವಿಲೇವಾರಿಯಾಗದೆ ಬಾಕಿ ನೋಡಿ ಗರಂ

harish poonja
ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಕಚೇರಿಗೆ ಶಾಸಕ ಹರೀಶ್ ಪೂಂಜ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

ಸರ್ವೆ ಇಲಾಖೆಗೆ ಭೇಟಿ ನೀಡಿದ ಶಾಸಕರು ಸಾವಿರಾರು ಸಂಖ್ಯೆಯಲ್ಲಿ ಕಡತ ಬಾಕಿಯಾಗಿರುವ ಬಗ್ಗೆ ಪ್ರಶ್ನಿಸಿದರು. 1400ಕ್ಕೂ ಹೆಚ್ಚು ಕಡತಗಳು ಬಾಕಿಯಾಗಿದ್ದು, ಕೂಡಲೇ ವಿಲೇವಾರಿ ಮಾಡುವಂತೆ ಸೂಚಿಸಿದರು.

ಕೊಕ್ಕಡದ ನಾಲ್ಕು ಕುಟುಂಬಗಳಿಗೆ ಯಾವುದೇ ಮೂಲಸೌಲಭ್ಯಗಳಿಲ್ಲ. ಅವರಿಗೆ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಪತ್ರಗಳು ಇಲ್ಲ. ಅವರು ವಾಸಿಸುವ ಮನೆಗಳು ಯಾವುದೇ ಕ್ಷಣದಲ್ಲಿ ಕುಸಿಯುವ ಹಂತದಲ್ಲಿದೆ ಎಂದು ಕೊಕ್ಕಡ ಗ್ರಾ.ಪಂ ಮಾಜಿ ಅಧ್ಯಕ್ಷ ಯೋಗೀಶ್ ಶಾಸಕರು ಹಾಗೂ ಅಧಿಕಾರಿಗಳ ಗಮನ ಸೆಳೆದರು.

ಈ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ ಎಂದ ತಹಸೀಲ್ದಾರರು, ಸುರಕ್ಷಿತವಲ್ಲದ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ತಾತ್ಕಾಲಿಕ ಕಾಳಜಿ ಕೇಂದ್ರಗಳಿಗೆ ಕಳುಹಿಸುವುದಾಗಿ ತಿಳಿಸಿದರು. ಈ ಕುಟುಂಬಗಳಿಗೆ ಅಗತ್ಯ ದಾಖಲೆ ಮಾಡಿಕೊಡುವಂತೆಯೂ ಅವರಿಗೆ ಮನೆಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ತಹಸೀಲ್ದಾರರಿಗೆ ಸೂಚಿಸಿದರು. ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿದ್ದು ಇವರಿಗೆ ಮೊದಲು ವಾಸ್ತವ್ಯ ಪ್ರಮಾಣಪತ್ರ ನೀಡಿ ಬಳಿಕ ಆಧಾರ್ ಕಾರ್ಡ್ ನೀಡುವುದಾಗಿ ತಹಸೀಲ್ದಾರ್ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

ನದಿ ಒತ್ತುವರಿ ತೆರವು

ತಾಲೂಕು ಕಚೇರಿಯ ಸ್ವಚ್ಛತೆ ಕೊರತೆ ಬಗ್ಗೆ ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಶಾಸಕರು ಯಾವ ರೀತಿ ಕೆಲಸ ನಡೆಯುತ್ತಿದೆ, ಯಾವೆಲ್ಲ ಕಡತ ಬಾಕಿಯಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಶಿರ್ಲಾಲಿನಲ್ಲಿ ನದಿ ಒತ್ತುವರಿ ಮಾಡಿರುವ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಶಾಸಕರು ತಹಸೀಲ್ದಾರಿಗೆ ಸೂಚಿಸಿದರು. ಈ ಬಗ್ಗೆ ಪರಿಶೀಲಿಸಿ ಎಲ್ಲ ಅಕ್ರಮ ತೆರವುಗೊಳಿಸುವುದಾಗಿ ತಹಸೀಲ್ದಾರ್ ತಿಳಿಸಿದರು. ಕಣಿಯೂರಿನಲ್ಲಿ ಜಮೀನು ಅಕ್ರಮಮಾಡಿ ಕೃಷಿ ಮಾಡುವ ಪ್ರಯತ್ನ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರು ತಹಸೀಲ್ದಾರರಿಗೆ ಸೂಚಿಸಿದರು.

ತಾಲೂಕಿನಲ್ಲಿ 95ಸಿ 1612 ಕಡತ ಬಾಕಿಯಿದ್ದು, ಅದರಲ್ಲಿ 1198 ಅರ್ಜಿಗಳು ಅರಣ್ಯ ಇಲಾಖೆಯ ಅಭಿಪ್ರಾಯಕ್ಕಾಗಿ ವರ್ಗಾವಣೆಯಾಗಿದೆ. 318 ಅರ್ಜಿಗಳು ತಾಲೂಕು ಕಚೇರಿಯಲ್ಲೇ ಬಾಕಿಯಿವೆ ಎಂಬ ಮಾಹಿತಿ ಅಧಿಕಾರಿಗಳು ನೀಡಿದ್ದಾರೆ. ಅರಣ್ಯ ಇಲಾಖೆಯ ಬಳಿ ಇರುವ ಅರ್ಜಿಗಳು ಯಾವ ಹಂತದಲ್ಲಿದೆ ಎಂಬ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net