

ಮಂಗಳೂರು : ಪ್ರಾದೇಶಿಕ ಚಲನ ಚಿತ್ರಗಳಿಗೆ ಸರ್ಕಾರದಿಂದ ಸಬ್ಸಿಡಿ ನೀಡುವಂತೆ ವಿನಂತಿಸಿ ತುಳು ಚಲನ ಚಿತ್ರ ನಿರ್ಮಾಪಕರ ಸಂಘದ
ಅಧ್ಯಕ್ಷ ಆರ್. ಧನರಾಜ್ ನೇತ್ರತ್ವದ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಪ್ರತೀ ವರ್ಷ 15 ರಿಂದ 20 ತುಳು ಸಿನಿಮಾಗಳು ತೆರೆ ಕಾಣುತ್ತಿದೆ. ಪ್ರಾದೇಶಿಕ ಭಾಷೆಗಳ ಅಭಿಮಾನದಿಂದ ನಿರ್ಮಾಪಕರು ತುಳು ಚಲನಚಿತ್ರ ನಿರ್ಮಿಸುತ್ತಿದ್ದಾರೆ. ಯಾವ ಪರಭಾಷೆಗೆ ಕಡಿಮೆ ಇಲ್ಲದಂತೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸಿನಿಮಾ ನಿರ್ಮಾಣವಾಗುತ್ತಿದೆ.
ಸದ್ಯ 3-4 ಸಿನಿಮಾಗಳಿಗೆ ಮಾತ್ರ ಸಬ್ಸಿಡಿ ನೀಡುವ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಕನಿಷ್ಠ 15 ಸಿನಿಮಾಗಳಿಗೆ ಸಬ್ಸಿಡಿ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಮಂಗಳೂರಿನಲ್ಲಿ ತುಳು ಚಲನ ಚಿತ್ರ ನಿರ್ಮಾಪಕರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಜಮೀನು ಅಗತ್ಯವಿದೆ. ಮಂಗಳೂರು ಹೋಬಳಿಯ ಕೊಡಿಯಾಲ್ ಬೈಲ್ ಎ ಗ್ರಾಮದ ಸರ್ವೆ ನಂಬ್ರ 1554 - 2 ಬಿ ಯಲ್ಲಿ ಖಾಲಿ ಜಮೀನು ಸರ್ಕಾರದ ವಶದಲ್ಲಿದ್ದು, ಆ ಜಮೀನಿನಲ್ಲಿ ಐದು ಸೆಂಟ್ಸ್ ಜಾಗವನ್ನು ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಕಟ್ಟಡಕ್ಕೆ ಜಾಗ ಮಂಜೂರು ಮಾಡಲು ಜಿಲ್ಲಾಧಿಕಾರಿಯವರಿಗೆ ಆದೇಶ ನೀಡುವಂತೆ ಮನವಿಯಲ್ಲಿ ತಿಳಿಸಲಾಹಿದೆ.
ತುಳು ಚಲನ ಚಿತ್ರ ನಿರ್ಮಾಪಕರ ಸಂಘ ನೀಡಿದ ಮನವಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭ ತಿಳಿಸಿದರು.