

ಸಿಂಧನೂರು: ತಾಲೂಕಿನ ಹಿಂದಿನ ಶಾಸಕರ ಅವಧಿಯ ಕೊನೆ ಹಂತದಲ್ಲಿ ಆರಂಭಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ ಹಿಡಿದ ಗ್ರಹಣವನ್ನು ನೂತನ ಶಾಸಕ ಹಂಪನಗೌಡ ಬಾದರ್ಲಿ ಬಿಡಿಸುವರೇ ಎನ್ನುವ ಪ್ರಶ್ನೆ ಜನರಿಂದ ಕೇಳಿ ಬರುತ್ತಿದೆ.
ತಾಲೂಕಿನಲ್ಲಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಿಂದ ಚಾಲನೆ ನೀಡದ್ದ ಕಾಮಗಾರಿಗಳು ಹಾಗೂ ಪ್ರಗತಿಯಲ್ಲಿದ್ದ ಕಾರ್ಯಗಳು ಸ್ಥಗಿತಗೊಂಡಿದ್ದವು. ಇದರಿಂದ ಅರೆಬರೆ ರಸ್ತೆ, ಕಟ್ಟಡಗಳಿಂದ ಸಾರ್ವಜನಿಕರು ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ. ಹಿಂದಿನ ಶಾಸಕ ವೆಂಕಟರಾವ ನಾಡಗೌಡರ ಅವಧಿಯ ಕೊನೆಯಲ್ಲಿ ಆರಂಭಿಸಿದ್ದ ಅಭಿವೃದ್ಧಿ ಕೆಲಸಗಳು ಒಂದುವರೆ ತಿಂಗಳಿಂದ ಸ್ಥಗಿತಗೊಂಡಿವೆ.
ಲೋಕೋಪಯೋಗಿ, ಜಿಪಂ, ಪಿಎಂಜಿಎಸ್‌ವೈ ಸೇರಿದಂತೆ ಪ್ರಮುಖ ಇಲಾಖೆಗಳ ಸುಮಾರು 55 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಅರೆಬರೆ ಸ್ಥಿತಿಯಲ್ಲಿ ಇವೆ. ಈಗಾಗಲೇ ಚುನಾವಣೆ ಮುಗಿದು, ನೂತನ ಶಾಸಕರು ಆಯ್ಕೆಗೊಂಡಿದ್ದಾರೆ. ಆದರೆ ತಾಲೂಕಿನಲ್ಲಿ ನಿಂತ ಕೆಲಸಗಳು ಆರಂಭಕ್ಕೆ ಮೀನ-ಮೇಷ ಏಣಿಸಲಾಗುತ್ತಿದೆ
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ವ್ಯಾಪ್ತಿಯ ರಾಮರೆಡ್ಡಿಕ್ಯಾಂಪ್ ರಸ್ತೆ, ಪಗಡದಿನ್ನಿಕ್ಯಾಂಪ್-ತಿಪ್ಪನಹಟ್ಟಿ ರಸ್ತೆ, ಪಿಎಂಜಿಎಸ್‌ವೈನ ರೈತನಗರಕ್ಯಾಂಪ್, ಹನುಮಾನ್‌ನಗರಕ್ಯಾಂಪ್ ಸೇರಿದಂತೆ ಬಹುಕೋಟಿ ವೆಚ್ಚದ ರಸ್ತೆ ಕಾಮಗಾರಿಗಳು ಹಾಗೂ ಜೆಜೆಎಂ ಯೋಜನೆ ಕಾರ್ಯಗಳು ಅರೆಬರೆಯಾಗಿವೆ. ಪಿಡಬ್ಲ್ಯುಡಿ ಇಲಾಖೆಯಿಂದ ತಾಲೂಕಿನ ಜವಳಗೇರಾದಿಂದ ತಿಪ್ಪನಹಟ್ಟಿ ಕ್ರಾಸ್, ಜಂಗಮರಹಟ್ಟಿ-ಸುಲ್ತಾನಪುರ, ಬಪ್ಪೂರು ರಸ್ತೆ, ಹಟ್ಟಿ ರಸ್ತೆ, ಒಳಬಳ್ಳಾರಿ ರಸ್ತೆ, ನಗರೋತ್ಥಾನ ಕಾಮಗಾರಿಗಳು, ಸಿಂಗಾಪುರ-ಮುಕ್ಕುಂದಾ ರಸ್ತೆ, ಗೊರೇಬಾಳಕ್ಯಾಂಪ್‌ನಿಂದ ರಂಗಾಪುರಕ್ಯಾಂಪ್, ಗಾಂಧಿನಗರ, ಗೋನವಾರ, ಪುಲದಿನ್ನಿ ಮುಖ್ಯರಸ್ತೆ, ಜವಳಗೇರಾ ಅಲಬನೂರು ಮಾರ್ಗದ ಬಂಗಾಲಿಕ್ಯಾಂಪ್ ಹತ್ತಿರ ರಸ್ತೆ ಪಕ್ಕದಲ್ಲಿ ತಡೆಗೋಡೆ ಹಾಗೂ ಅಗಲೀಕರಣ ಆರಂಭಿಸಲು ಸಾಧ್ಯವಾಗಿಲ್ಲ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಾಮಗಾರಿಗಳ ಅರೆಬರೆ ಸ್ಥಿತಿಯ ಬಗ್ಗೆ ಅಧಿಕಾರಿಗಳು ಮಾತನಾಡುತ್ತಿಲ್ಲ. ಹಿಂದಿನ ಶಾಸಕರು ಚಾಲನೆ ನೀಡಿದ ಕಾಮಗಾರಿಗಳು ಆರಂಭಗೊಂಡಿಲ್ಲ. ಈಗಾಗಲೇ ಕೆಲವು ಕಡೆಗಳಲ್ಲಿ ನೂತನ ಶಾಸಕರು ಪ್ರಗತಿ ಪರಿಶೀಲನೆ ಸಭೆ ನಡೆಸಿ, ಅರ್ಧಕ್ಕೆ ನಿಂತ ಕಾಮಗಾರಿಗಳಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಶಾಸಕರು ಸಚಿವ ಸ್ಥಾನಕ್ಕಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟದ್ದರು. ಅವರು ತಾಲೂಕಿಗೆ ಬಂದ ನಂತರ ಎಲ್ಲ ಸರಿ ಹೋಗಲಿದೆಂಬ ಚರ್ಚೆಗಳು ನಡೆಯುತ್ತಿವೆ.