More

    ಲೋಕಸಭಾ ಚುನಾವಣೆಯತ್ತ ದೃಷ್ಟಿ ಹಾಯಿಸಿದ ಸಿದ್ದರಾಮಯ್ಯ; ನೂತನ ಸಚಿವರಿಗೆ ಟಾರ್ಗೆಟ್ ಫಿಕ್ಸ್!

    ಬೆಂಗಳೂರು: ಚುನಾವಣಾ ಫಲಿತಾಂಶ ಪ್ರಕಟವಾಗಿ ಹದಿನೈದು ದಿನಗಳ ಒಳಗಾಗಿ ಪೂರ್ಣ ಪ್ರಮಾಣದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿರುವ ಸಿಎಂ ಸಿದ್ದರಾಮಯ್ಯ, ಇದೀಗ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ತಮ್ಮ ಮಂತ್ರಿಮಂಡಲದ ಎಲ್ಲಾ ಸಚಿವರಿಗೂ ವಿಶೇಷ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ.

    ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಪ್ರಧಾನಿ

    ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ನಾವು ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತು ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಿಗೆ ಉಡುಗೊರೆ ನೀಡಬೇಕು. ಈ ಗುರಿ ಇಟ್ಟುಕೊಂಡು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಚುರುಕಾಗಿ ಜವಾಬ್ದಾರಿ ನಿರ್ವಹಿಸಿ ಎಂದು ಎಲ್ಲಾ ಸಚಿವರಿಗೂ ಸಿದ್ದರಾಮಯ್ಯ ಮನವರಿಕೆ ಮಾಡಿದ್ದಾರೆ.

    ಖಾತೆ ಹಂಚಿಕೆ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ಎಲ್ಲರೂ ಇಂದಿನಿಂದಲೇ ಸಕ್ರಿಯರಾಗಿ. ವಿರೋಧಪಕ್ಷದಲ್ಲಿದ್ದಾಗ ನಾವು ನಡೆಸಿದ ಹೋರಾಟದ ಫಲವಾಗಿ ಜನತೆ ಬಿಜೆಪಿಯ ದುರಾಡಳಿತವನ್ನು ತಿರಸ್ಕರಿಸಿ ನಮ್ಮ ಕೈ ಹಿಡಿದಿದ್ದಾರೆ. ಈಗ ನಾವು ಸರ್ಕಾರವನ್ನು, ಸರ್ಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಮ್ಮ ಜನಪರ ನಿಷ್ಠೆ ಮತ್ತು ಕೆಲಸಗಳ ಮೂಲಕ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ದಾಖಲಿಸಬೇಕಿದೆ.

    ಕೇಂದ್ರದ ದುರಾಡಳಿತ ರಾಜ್ಯದಿಂದಲೇ ಕೊನೆಗೊಳ್ಳಲಿ

    ಕೇಂದ್ರದ ದುರಾಡಳಿತವನ್ನು ಕರ್ನಾಟಕದ ಮೂಲಕ ಕೊನೆಗೊಳಿಸಲು ಪರಿಸ್ಥಿತಿ ಹದವಾಗಿದೆ. ಇದನ್ನು ನಾವು ಮರೆಯಬಾರದು. ಹೀಗಾಗಿ ಸಚಿವರು ತಮಗೆ ಉಸ್ತುವಾರಿ ವಹಿಸಲಾಗುವ ಜಿಲ್ಲೆಗಳಿಗೆ ಹೆಚ್ಚೆಚ್ಚು ಪ್ರವಾಸ ಮಾಡಬೇಕು. ಜಿಲ್ಲೆ, ತಾಲ್ಲೂಕು ಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಬೇಕು. ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ನಿಗಾ ಇಟ್ಟು ಭ್ರಷ್ಟಾಚಾರಕ್ಕೆ ಬರೆ ಎಳೆಯಬೇಕು ಎಂದು ಎಲ್ಲಾ ಸಚಿವರಿಗೂ ಸಿದ್ದರಾಮಯ್ಯ ಟಾರ್ಗೆಟ್ ನೀಡಿದ್ದಾರೆ.

    ಕರ್ನಾಟಕದ ಜನತೆ ಬಹುಮತದಿಂದ ಗೆಲ್ಲಿಸುವ ಮೂಲಕ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ. ಹೀಗಿರುವಾಗ ಅವರ ನಿರೀಕ್ಷೆಗಳಿಗೆ ತಕ್ಕಂತೆ ಜನಪರ ಆಡಳಿತ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜನರ ಸಮಸ್ಯೆಗಳನ್ನು ಕೇಳಿಸಿಕೊಂಡು, ತಮ್ಮ ತಮ್ಮ ಕ್ಷೇತ್ರದಲ್ಲೇ ಸಮಸ್ಯೆ ಬಗೆಹರಿಸಲು ಮುಂದಾಗಿ. ಸಣ್ಣ ಪುಟ್ಟ ಕೆಲಸಗಳಿಗೂ ಕ್ಷೇತ್ರದ ಜನ ಸರ್ಕಾರಿ ಕಚೇರಿಗಳಿಗೆ ಪದೆ ಪದೆ ಅಲೆಯುವುದನ್ನು ತಪ್ಪಿಸಿ. ಜನರು ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಬಸ್ಸು, ರೈಲು ಹತ್ತಿಕೊಂಡು ವಿಧಾನಸೌಧಕ್ಕೆ ಬರುವ ಹೊರೆಯನ್ನು ತಪ್ಪಿಸಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

    ಗ್ಯಾರಂಟಿಗಳನ್ನು ಜನರ ಮನೆಗೆ ತಲುಪಿಸಿ

    ಚುನಾವಣೆಯಲ್ಲಿ ಸಂದರ್ಭದಲ್ಲಿ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ನಾಡಿನ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ನಾವು ನೀಡಿರುವ ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ತಲುಪುವಂತೆ ಎಲ್ಲಾ ಸಚಿವರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಹಿಂದಿನ ಬಾರಿಯ ತಪ್ಪುಗಳು ಈ ಬಾರಿ ಮರುಕಳಿಸಬಾರದು ಎಂದು ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts