ಯೋಜನೆ ಅನುಷ್ಠಾನದಲ್ಲಿರಲಿ ಕಾಳಜಿ ಶಾಸಕ ಡಾ.ಚಂದ್ರು ಲಮಾಣಿ ಸೂಚನೆ

19 lxr 1-KDP MEETNIG
Published on


ಲಕ್ಷೆ್ಮೕಶ್ವರ: ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಚುನಾವಣೆ ಸಂದರ್ಭ ಮತ್ತು ನಂತರ ನೀಡಿದ ಭರವಸೆಗಳನ್ನು ಈಡೇರಿಸಲಾಗುತ್ತಿಲ್ಲ. ಕಾರಣ ಅಧಿಕಾರಿಗಳ ನಿರುತ್ಸಾಹ, ನಿಷ್ಕಾಳಜಿ ಎದ್ದು ಕಾಣುತ್ತಿದೆ. ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಹಂತದ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರೇವಣಪ್ಪ ಮನಗೂಳಿ ಅವರೊಂದಿಗೆ ಚರ್ಚೆ ನಡೆಸಿದ ಶಾಸಕರು, ಪ್ರಸಕ್ತ ಮುಂಗಾರಿನಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ನೀಡಿದ ಹೆಸರು ಬೀಜ ಕಳಪೆಯಾಗಿದೆ. ರೈತರು ಹೆಚ್ಚಿನದರ ನೀಡಿ ಖಾಸಗಿ ಕಂಪನಿಯ ಬೀಜಗಳನ್ನು ಖರೀದಿಸುವಂತಾಯಿತು. ಇದರಿಂದ ಇಲಾಖೆಯ ಬಿತ್ತನೆ ಬೀಜಗಳು ಮಾರಾಟವಾಗದೇ ಉಳಿದಿವೆ. ಮುಂಬರುವ ದಿನಗಳಲ್ಲಿ ಈ ಸಮಸ್ಯೆಯಾಗದಂತೆ ಮುಂಜಾಗ್ರತೆ ಕೈಗೊಳ್ಳಬೇಕು ಎಂದರು.
ಹೊಸ ಅಂಗನವಾಡಿ ಕಟ್ಟಡ ನಿರ್ವಣಕ್ಕೆ ಜಿಪಂನಿಂದ ಬಂದಿರುವ ಅನುದಾನದ ಜತೆಗೆ ನರೇಗಾ ಅನುದಾನ ಬಳಸಿ ಗುಣಮಟ್ಟದ ಕಾಮಗಾರಿಯೊಂದಿಗೆ ಅಂಗನವಾಡಿ ಕಟ್ಟಡ ನಿರ್ವಣಕ್ಕೆ ಮುಂದಾಗಬೇಕು ಎಂದು ಸಿಡಿಪಿಒ ಮೃತ್ಯುಂಜಯ ಗುಡ್ಡದನವೇರಿ ಅವರಿಗೆ ಸೂಚಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜೆಜೆಎಂ ಯೋಜನೆ ಕಾಮಗಾರಿ ಅತ್ಯಂತ ಕಳಪೆ ಮತ್ತು ನಿಧಾನಗತಿಯಲ್ಲಿ ಸಾಗಿದೆ. ವರ್ಷಗಳೇ ಕಳೆದರೂ ಎಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ, ಜೆಜೆಎಂ ಕಾಮಗಾರಿ ಪ್ರಗತಿ ವರದಿಯಲ್ಲಿ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ತಪ್ಪು ಮಾಹಿತಿ ನೀಡಿದ್ದೀರಿ. ಕ್ರಿಯಾಯೋಜನೆಯಂತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಪಿಆರ್​ಡಿ ಇಂಜಿನಿಯರ್ ಮಾರುತಿ ರಾಠೋಡ ಅವರಿಗೆ ಸೂಚಿಸಿದರು.
ತಾಲೂಕಿನಲ್ಲಿ ಹದಗೆಟ್ಟ ರಸ್ತೆ ಕಾಮಗಾರಿ, ಮಳೆಯಿಂದ ಹಾಳಾದ ಸೇತುವೆ ನಿರ್ವಣದತ್ತ ಗಮನ ಹರಿಸಿ ರೈತರು, ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅನಕೂಲ ಕಲ್ಪಿಸಬೇಕು ಎಂದು ಪಿಡಬ್ಲ್ಯು್ಲ ಮತ್ತು ಪಿಎಂಜಿಎಸ್​ವೈ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ವಾಸುದೇವ ಎಂ. ಸ್ವಾಮಿ, ತಾಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ, ತಾಪಂ ಇಒ ಕೃಷ್ಣಪ್ಪ ಧರ್ಮರ ಉಪಸ್ಥಿತರಿದ್ದರು. ಶಿಕ್ಷಣ, ಆರೋಗ್ಯ, ತೋಟಗಾರಿಕೆ, ಅರಣ್ಯ, ಭೂಮಾನ, ನೋಂದಣಾಧಿಕಾರಿ, ನೀರಾವರಿ, ಸಾರಿಗೆ, ಪುರಸಭೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.


ಸರ್ಕಾರದ ವಿರುದ್ಧ ಆಕ್ರೋಶ: ಅಂಗನವಾಡಿಗಳಲ್ಲಿ ಮಕ್ಕಳಿಗೆ, ಬಾಣಂತಿಯರಿಗೆ ನೀಡುವ ಬೆಲ್ಲ, ಮೊಟ್ಟೆ, ರವೆ ಸೇರಿ ಆಹಾರ ಪದಾರ್ಥಗಳು ಗುಣಮಟ್ಟದ್ದಾಗಿಲ್ಲ. ಅಂಗನವಾಡಿಗೆ ಆಹಾರ ವಿತರಣೆ ಮಾಡುವ ಜವಾಬ್ದಾರಿಯನ್ನು 10 ವರ್ಷಗಳ ಕಾಲ ಕಪ್ಪು ಪಟ್ಟಿಗೆ ಸೇರಿದ ತಮಿಳುನಾಡು ಮೂಲದ ಗುತ್ತಿಗೆದಾರರಿಗೆ ಅವಕಾಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಡಾ. ಚಂದ್ರು ಲಮಾಣಿ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net