

ವಿಜಯವಾಣಿ ಸುದ್ದಿಜಾಲ ಬೈಂದೂರು
ವಿಧಾನಮಂಡಲ ಅಧಿವೇಶನದ ನಡುವೆಯೂ ಶಾಸಕ ಗುರುರಾಜ್ ಗಂಟಿಹೊಳೆ ಅವರು ಹೋರಾಟದ ಸ್ವರೂಪ ಪಡೆದಿದ್ದ ಕಲ್ಲುಕ್ವಾರಿ ವಿಚಾರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ನಡುವೆ ಸಚಿವರನ್ನು ಭೇಟಿಯಾದ ಶಾಸಕ ಗುರುರಾಜ್, ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು, ಶಿಲೆ ಕಲ್ಲು ಹಾಗೂ ಮರಳು ಸಿಗದೇ ಕ್ವಾರಿ ಮಾಲೀಕರು, ಲಾರಿ ಮಾಲೀಕರು, ರೈತರು ಹಾಗೂ ಕೂಲಿ ಕಾರ್ಮಿಕರ ಸಹಿತ ವಿವಿಧ ಕಟ್ಟಡ ಕಾಮಗಾರಿಗಳಿಗೆ ಸಾಮಗ್ರಿಗಳು ದೊರೆಯದೇ ಇಡೀ ಜಿಲ್ಲೆಯು ತೊಂದರೆಗೊಳಗಾದ ಬಗ್ಗೆ ಸಚಿವರ ಗಮನಸೆಳೆದರು.
ಜಿಲ್ಲಾಡಳಿತ ಏಕಾಏಕಿ ಕೆಂಪು ಕಲ್ಲು ತೆಗೆಯುವ ಸಂಬಂಧ 3ಎಬಿ ನಡಿ ನೀಡಿರುವ ಅನುಮತಿಗಳನ್ನು ರದ್ದುಪಡಿಸಿದ್ದು, ಈ ಹಿಂದಿನಂತೆ ಕರಾವಳಿಯ ಜಿಲ್ಲೆಗಳಲ್ಲಿ 3ಎ ಮೂಲಕ ಕೆಂಪು ಕಲ್ಲು ತೆಗೆಯಲು ಅನುಮತಿ ನೀಡುವಂತೆ ಸಚಿವರನ್ನು ಶಾಸಕರು ಆಗ್ರಹಿಸಿದರು.
ಶಾಸಕರ ಆಗ್ರಹಕ್ಕೆ ಸ್ಪಂದಿಸಿದ ಸಚಿವರು ಶೀಘ್ರವೇ ಸಮಸ್ಯೆಗಳ ಬಗೆಹರಿಸುವಂತೆ ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ ಜತೆಗಿದ್ದರು.