ಮುಂಡ್ಲಿ ಸೇತುವೆ ಶಿಥಿಲ

mundli
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಳೆದ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡ ಗ್ರಾಮೀಣ ಭಾಗದ ಪ್ರಮುಖ ಸಂಪರ್ಕ ಕೊಂಡಿ ಮುಂಡ್ಲಿ ಸೇತುವೆ ಇದೀಗ ಶಿಥಿಲಗೊಂಡಿದ್ದು, ಅಪಾಯಕಾರಿ ಮಟ್ಟಕ್ಕೆ ತಲುಪಿದೆ.

ಕಾರ್ಕಳ ನಗರದಿಂದ ತೆಳ್ಳಾರು ಮಾರ್ಗವಾಗಿ ದುರ್ಗಾ, ಮುಂಡ್ಲಿ, ಶಿರ್ಲಾಲು, ಕೆರ್ವಾಶೆ ಗ್ರಾಮ ಸಂಪರ್ಕಿಸುವ ಪ್ರಮುಖ ಕೊಂಡಿ ರಸ್ತೆಯಲ್ಲಿರುವ ಮುಂಡ್ಲಿ ಸೇತುವೆ ಸಂಪೂರ್ಣ ಶಿಥಿಲ ವ್ಯವಸ್ಥೆಗೆ ತಲುಪಿ ಈಗಾಗಲೇ ಹಲವು ದಶಕಗಳೇ ಕಳೆದಿದೆ. ಸೇತುವೆ ಮೇಲಿನ ಡಾಂಬರು ಕಿತ್ತು ಹೋಗಿದ್ದು, ಅಲ್ಲಲ್ಲಿ ಹೊಂಡ ಗುಂಡಿ ನಿರ್ಮಾಣವಾಗಿದೆ. ಇತ್ತೀಚೆಗೆ ತೇಪೆ ಹಾಕುವ ಕಾರ್ಯವಾದರೂ ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸಾಧ್ಯತೆಗಳಿವೆ.

ತಳಭಾಗ ಸಂಪೂರ್ಣ ದುರ್ಬಲ

ಮಳೆಗಾಲದಲ್ಲಿ ನೀರಿನ ಪ್ರವಾಹ ಸೇತುವೆಗೆ ಅಪ್ಪಳಿಸಿ ಸೇತುವೆ ತಳಭಾಗ ಸಂಪೂರ್ಣ ದುರ್ಬಲಗೊಂಡಿದೆ. ಕೆಳಭಾಗದಿಂದ ಮೇಲ್ಭಾಗದವರೆಗೂ ಸಿಮೆಂಟ್ ಕಾಂಕ್ರೀಟ್ ಎದ್ದು ಕಬ್ಬಿಣದ ಸಲಾಕೆ ಬಲಹೀನವಾದಂತೆ ಗೋಚರಿಸುತ್ತಿದೆ. ತಳಭಾಗದಲ್ಲಿ 7 ಆಧಾರ ಸ್ತಂಭಗಳಿದ್ದು, ಇದರಲ್ಲಿ ನಾಲ್ಕು ಆಧಾರ ಸ್ತಂಭಗಳು ಬಿರುಕು ಬಿಟ್ಟಿವೆ. ಇದರ ಪಕ್ಕದಲ್ಲೇ ಜಲವಿದ್ಯುತ್ ಸ್ಥಾವರದ ಪವರ್ ಪ್ರಾಜೆಕ್ಟ್ ಘಟಕ ಕೂಡ ಕಾರ್ಯಾಚರಿಸುತ್ತಿದೆ. ಇದಾದ ಬಳಿಕ ಪ್ರತಿ ವರ್ಷ ಮಳೆಗಾಲದಲ್ಲಿ ಸೇತುವೆ ಒಂದು ಪಾರ್ಶ್ವ ಕುಸಿಯುತ್ತಲೇ ಇದೆ. 2014ರಲ್ಲಿ ಸೇತುವೆ ಪಕ್ಕದಲ್ಲಿಯೇ ನೀರಿನ ಸೆಳೆತಕ್ಕೆ ರಸ್ತೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ಅನಂತರದ ವರ್ಷಗಳಲ್ಲಿಯೂ ಅದು ಮರುಕಳಿಸಿದೆ. ಹೀಗೆ ಮತ್ತಷ್ಟು ಸಮಸ್ಯೆ ಆಗುವ ಮುನ್ನ ಹೊಸ ಸೇತುವೆ ನಿರ್ಮಾಣದ ಬಗ್ಗೆ ಸರ್ಕಾರ ಗಮನ ಹರಿಸಬೇಕಾಗಿದೆ ಎನ್ನುವುದು ಗ್ರಾಮಸ್ಥರ ಮಾತು.

ಹಳೇ ಸೇತುವೆ

ಸುಮಾರು 40ಕ್ಕೂ ಅಧಿಕ ವರ್ಷಗಳಷ್ಟು ಹಳೆಯ ಸೇತುವೆಯಾಗಿದೆ. 1994ರ ಬಳಿಕವಂತೂ ತೀರಾ ಅಪಾಯದ ಸ್ಥಿತಿಗೆ ಬಂದು ತಲುಪಿದ್ದು, ಈ ಸೇತುವೆ ದಾಟಿಕೊಂಡು ಸಾಗುವ ಸುತ್ತಮುತ್ತಲಿನ ಗ್ರಾಮದ ಜನ ಮನವಿ ಮಾಡುತ್ತ ಬಂದರೂ ಇಲ್ಲಿವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಅಂದಾಜು ಪಟ್ಟಿ ಸಲ್ಲಿಕೆ

ಶಿಥಿಲ ಸೇತುವೆಯಿಂದ ಆತಂಕಕ್ಕೆ ಒಳಗಾದ ಗ್ರಾಮಸ್ಥರ ಒತ್ತಾಯದ ಮೇರೆಗೆ ಹೊಸ ಸೇತುವೆ ನಿರ್ಮಾಣ ಸಂಬಂಧ 12 ಕೋಟಿ ರೂ. ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆಗಾಗಿ ಸಲ್ಲಿಸಿ ವರ್ಷಗಳೇ ಸಂದಿದ್ದರೂ ಸೇತುವೆಗೆ ಶಾಶ್ವತ ಪರಿಹಾರ ಮಾತ್ರ ದೊರಕುತ್ತಿಲ್ಲ. ಮುಂಡ್ಲಿ ಗ್ರಾಮ ಹಾಗೂ ಸ್ಥಳೀಯ ನಾಲ್ಕೈದು ಗ್ರಾಮದ ಜನ ತಾಲೂಕು ಕೇಂದ್ರ ಕಾರ್ಕಳಕ್ಕೆ ಹಾಗೂ ಪ್ರಮುಖ ಸ್ಥಳ ಸಂಪರ್ಕಿಸಲು ಇದೇ ಸೇತುವೆ ಅವಲಂಬಿತರಾಗಿದ್ದಾರೆ. ಈ ಹಿಂದೆ ಶಿರ್ಲಾಲು ಗ್ರಾಪಂ ವ್ಯಾಪ್ತಿಯಲ್ಲಿದ್ದ ಈ ಸೇತುವೆ ಬಳಿಕ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಹಸ್ತಾಂತರವಾಗಿದೆ. ಜಲವಿದ್ಯುತ್ ಸ್ಥಾವರದಿಂದಲೇ ಸೇತುವೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮೀಣ ಭಾಗದ ನಾಲ್ಕೈದು ಗ್ರಾಮದ ಪ್ರಮುಖ ಕೊಂಡಿಯಾಗಿರುವ ಈ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಅಪಾಯಕಾರಿಯಾಗಿದೆ. ಪ್ರತಿ ವರ್ಷವೂ ತೇಪೆ ಹಾಕುವುದು ಬಿಟ್ಟರೆ ಹೊಸ ಸೇತುವೆ ನಿರ್ಮಾಣದ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ. -ಹರೀಶ್ ಪೂಜಾರಿ, ನಿತ್ಯ ಪ್ರಯಾಣಿಕ ತೀರಾ ಶಿಥಿಲಗೊಂಡ ಸೇತುವೆ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುವ ಉತ್ತರ ಹಲವು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಆದರೆ ಈ ಸೇತುವೆ ನಿರ್ಮಾಣಕ್ಕಾಗಿ ಇಲ್ಲಿವರೆಗೂ ಯಾವುದೇ ಅನುದಾನ ಮೀಸಲಿಟ್ಟಂತಿಲ್ಲ. ಜನ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. -ಪ್ರವೀಣ್ ಗ್ರಾಮಸ್ಥ https://www.vijayavani.net/action-taken-for-lake-development-as-per-availability https://www.vijayavani.net/amritabharati-institute-for-teaching-ethics

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net