

ಚನ್ನಗಿರಿ: ಮರು ಸೃಷ್ಟಿ ಮಾಡಲು ಸಾಧ್ಯವಾಗದ ನೀರನ್ನು ಹಿತ- ಮಿತವಾಗಿ ಬಳಸಬೇಕು. ಮುಂದಿನ ದಿನದಲ್ಲಿ ನೀರು ಸಿಗುವುದೇ ಕಷ್ಟವಾಗುತ್ತದೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.
ತಾಲೂಕಿನ ಗಿರಿಯಾಪುರದಲ್ಲಿ ಮಂಗಳವಾರ ಜಿಪಂ, ತಾಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲ ಮಿಷನ್ ಯೋಜನೆಯಡಿ 24*7 ನೀರು ಸರಬರಾಜು ಗ್ರಾಮ ಘೊಷಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ನಿರಂತರ ನೀರು ಸರಬರಾಜು ಯೋಜನೆಯಲ್ಲಿ ಚನ್ನಗಿರಿ ತಾಲೂಕಿನ 25 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ತಿಳಿನೀರುಕಟ್ಟೆ ಹಾಗೂ ಮೇಳ್ಯಾನಾಯ್ಕನ ಕಟ್ಟೆ ಗ್ರಾಮದಲ್ಲಿ ಲೋಕರ್ಪಣೆ ಮಾಡಲಾಗಿದೆ. ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಕಾಡುತ್ತದೆ, ಇಂತಹ ಸಮಯದಲ್ಲಿ ಪ್ರತಿದಿನ ನಲ್ಲಿ ಮೂಲಕ ಜನರಿಗೆ ನೀರು ವಿತರಿಸಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜಲಜೀವನ ಮಿಷನ್ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇ.45 ರಷ್ಟು ಅನುದಾನ ನೀಡುತ್ತದೆ. ಉಳಿದ ಶೇ 10ರಷ್ಟು ಹಣವನ್ನು ಗ್ರಾಮೀಣ ಭಾಗದ ಸಾರ್ವಜನಿಕರಿಂದ ವಂತಿಕೆ ರೂಪದಲ್ಲಿ ಪಡೆದು ಪ್ರತಿದಿನ ಒಬ್ಬ ವ್ಯಕ್ತಿಗೆ 55 ಲೀಟರ್ ನೀರು ನೀಡಲಾಗುತ್ತದೆ. ಯೋಜನೆಯಲ್ಲಿ ನಿರಂತರವಾಗಿ ನೀರು ಕೊಡಲಾಗುತ್ತದೆ ಎಂದು ತಿಳಿಸಿದರು.
ಯೋಜನೆಯಲ್ಲಿ ಶೇ.50 ರಷ್ಟು ಮಹಿಳೆಯರೇ ಇರುತ್ತಾರೆ. ಗ್ರಾಪಂ ಅಧ್ಯಕ್ಷರು ಯೋಜನೆಯ ಅಧ್ಯಕ್ಷರಾಗಿರುತ್ತಾರೆ. ಸಮಿತಿಯವರು ನಮ್ಮ ಸ್ವಂತ ಯೋಜನೆ ಎಂದು ಉಪಯೋಗಿಸಬೇಕು. ದುರಸ್ತಿಯನ್ನು ನೀವೇ ಮಾಡಿಕೊಳ್ಳಬೇಕಾಗುತ್ತದೆ, ಯೋಜನೆ ಯಶಸ್ವಿಯಾಗದಿದ್ದರೆ ಸರ್ಕಾರದಿಂದ ಅನುದಾನ ಬರುವುದು ಕಷ್ಟವಾಗಲಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಮಾತನಾಡಿ, ಜಿಲ್ಲೆಯಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ನಿರಂತರ ನೀರು ಸರಬರಾಜು ಯೋಜನೆಯಡಿ 100 ಗ್ರಾಮಗಳನ್ನು ಆಯ್ಕೆಮಾಡಲಾಗಿದೆ. ನೀರಿಗಾಗಿ ಮಕ್ಕಳು ಶಾಲೆ ಮತ್ತು ಕುಟುಂಬದವರು ದುಡಿಮೆ ಬಿಟ್ಟು ಕಾಯುವುದು ಇದರಿಂದ ತಪ್ಪಲಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಸುಮಂಗಳಾ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಲೋಹಿತ್ಕುಮಾರ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಬಿ.ಕೆ. ಉತ್ತಮ್ ಗ್ರಾಪಂ ಸದಸ್ಯರು ಇದ್ದರು.