

ಮಾಗಡಿ
ಪೊಲೀಸ್ ಠಾಣೆಗೆ ನುಗ್ಗಿ ಸಿಪಿಐಗೆ ಧಮ್ಕಿ ಹಾಕಿದ್ದ ಪ್ರಕರಣದಲ್ಲಿ ಶಾಸಕ ಬಾಲಕೃಷ್ಣ ಸೇರಿ 16 ಮಂದಿ ವಿರುದ್ಧದ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ತಾಲೂಕಿನ ಐಯ್ಯಂಡಹಳ್ಳಿ ರಂಗಸ್ವಾಮಿ ಎಂಬುವರು ಎಚ್.ಸಿ.ಬಾಲಕೃಷ್ಣ ಅವರ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದರೂ ಈ ಬಗ್ಗೆ ಸಿಪಿಐ ನಂದೀಶ್ ಕ್ರಮಕೈಗೊಳ್ಳದೆ ಒಬ್ಬರ ಪರವಾಗಿದ್ದಾರೆ ಎಂದು 7 ವರ್ಷದ ಹಿಂದೆ ಕುದೂರು ಪೊಲೀಸ್ ಠಾಣೆಗೆ ಬೆಂಬಲಿಗರೊಂದಿಗೆ ತೆರಳಿ ಸಿಪಿಐ ಅವರನ್ನು ಅವ್ಯಾಚ್ಯವಾಗಿ ನಿಂದಿಸಿ, ವಾಗ್ವಾದ ನಡೆಸಿದ್ದರು ಎಂಬ ವಿಚಾರವಾಗಿ ಎಚ್.ಸಿ.ಬಾಲಕೃಷ್ಣ ಸೇರಿ 16 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
16 ಮಂದಿಯೂ ಮಾಗಡಿ ಒಂದನೇ ಜೆಎಂಎಫ್ಸಿ ಕೋರ್ಟ್ನಲ್ಲಿ ಜಾಮೀನು ಪಡೆದಿದ್ದರು. ನಂತರ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಎರಡು ವರ್ಷದ ಹಿಂದೆ ಪ್ರಮುಖ ಸಾದಾರ ಕೆ.ಆರ್.ಪುರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಪಿಐ ನಂದೀಶ್ ಮೃತಪಟ್ಟಿದ್ದರು. ಅಂತಿಮವಾಗಿ ಗುರುವಾರ ಆ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಎಚ್.ಸಿ.ಬಾಲಕೃಷ್ಣ, ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ಎಂ.ಕೆ.ಧನಂಜಯ, ಹೊನ್ನಾಪುರ ಶಿವಪ್ರಸಾದ್, ಧನಂಜಯ ನಾಯ್ಕ, ಶಿವರಾಜು, ಲೋಕೇಶ್, ಮೂರ್ತಿ, ಮಣ್ಣಿಗಾನಹಳ್ಳಿ ಸುರೇಶ್, ಪೊಲೀಸ್ ರಾಮಣ್ಣ, ಮಣ್ಣಿಗನಹಳ್ಳಿ ರಮೇಶ್, ಹುಲಿಕಲ್ಲು ಶಶಿ, ಐಯ್ಯಂಡಹಳ್ಳಿ ಚಂದ್ರು, ಜಿ.ವಿ.ರಾಮಣ್ಣ, ಐಯ್ಯಂಡಹಳ್ಳಿ ಚಂದ್ರಪ್ಪ ಸೇರಿ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಕಾರ್ಯಕರ್ತನಿಗೆ ನೋವಾಗಿರುವ ಬಗ್ಗೆ ಜನಪ್ರತಿನಿಧಿ ನೆಲೆಯಲ್ಲಿ ಮಾತನಾಡಿದ್ದೆ. ಯಾವುದೇ ದ್ವೇಷದಿಂದ, ವೈಯಕ್ತಿಕವಾಗಿ ಮಾತನಾಡಿರಲಿಲ್ಲ. ಈ ಘಟನೆಯನ್ನು ಕೆಲವರು ವೈಭವೀಕರಣ ಮಾಡಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪರಿಗಣಿಸಿ ವಿಮುಕ್ತಿಗೊಳಿಸಿದೆ.
ಎಚ್.ಸಿ.ಬಾಲಕೃಷ್ಣ ಶಾಸಕ