ಅಧಿಕಾರಿಗಳು ಚಳಿ ಬಿಟ್ಟು ಕೆಲಸ ಮಾಡಿ

cc
Published on

ಚನ್ನಪಟ್ಟಣ  : ಶಾಸಕ ಸಿ.ಪಿ.ಯೋಗೇಶ್ವರ್ ಸೋಮವಾರ ಕೋಡಂಬಳ್ಳಿ ಜಿಪಂ ವ್ಯಾಪ್ತಿಯ ವಿವಿಧ ಗ್ರಾಪಂಗಳಲ್ಲಿ ಇ-ಸ್ವತ್ತು ಅಭಿಯಾನ ಹಾಗೂ ಸಾರ್ವಜನಿಕರ ಕುಂದು-ಕೊರತೆಗಳ ಅಹವಾಲು ಸ್ವೀಕಾರ ಆಂದೋಲನ ಸಭೆ ನಡೆಸಿದರು.

ಜಿಪಂ ವ್ಯಾಪ್ತಿಯ ವಿರುಪಾಕ್ಷಿಪುರ, ಕೋಡಂಬಳ್ಳಿ, ಜೆ.ಬ್ಯಾಡರಹಳ್ಳಿ ಹಾಗೂ ವೈ.ಟಿ.ಹಳ್ಳಿ ಗ್ರಾಪಂಗಳಲ್ಲಿ ಸಭೆ ನಡೆಸಿ ಶಾಸಕರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಕಂದಾಯ, ಸರ್ವೇ, ಪಡಿತರ ಸೇರಿ ಹಲವು ಸಮಸ್ಯೆಗಳನ್ನು ಗಮನಿಸಿ ಬಗೆಹರಿಸುವ ಕುರಿತು ವಾಗ್ದಾನ ನೀಡಿದರು.

ಗ್ರಾಪಂಗೆ ಸರ್ಕಾರ ಸಾಕಷ್ಟು ಅವಕಾಶ ಹಾಗೂ ಅಧಿಕಾರ ನೀಡಿದೆ. ಗ್ರಾಪಂ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದರೆ ಬಹುತೇಕ ಸಮಸ್ಯೆ ಪರಿಹರಿಸಬಹುದು. ಗ್ರಾಪಂ ಅಧಿಕಾರಿಗಳು ಮೈ ಚಳಿ ಬಿಟ್ಟು ಕೆಲಸ ಮಾಡಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಕರೆ ನೀಡಿದರು.

ಹಲವು ದಿನಗಳಿಂದ ನಡೆಸುತ್ತಿರುವ ಈ ಸಭೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬಂದಿವೆ. ಈ ಹಿಂದೆ ಆಡಳಿತ ನಡೆಸಿದವರ ಲೋಪದಿಂದ ಸಮಸ್ಯೆಗಳು ಬಿಗಡಾಯಿಸಿವೆ. ಪ್ರತಿಗ್ರಾಮಗಳಲ್ಲೂ ವಿವಿಧ ಸಮಸ್ಯೆಗಳನ್ನು ಜನತೆ ಹೇಳಿಕೊಳ್ಳುತ್ತಿದ್ದಾರೆ. ಇದು ಮೊದಲ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಬಹುತೇಕ ಸಮಸ್ಯೆ ಪರಿಹರಿಸುವ ಸವಾಲು ನನ್ನ ಮುಂದಿದೆ ಎಂದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ : ಮಂಗಾಡಹಳ್ಳಿ ಗ್ರಾಮದಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರವೇರಿಸಿದರು. ಕೋಡಂಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಶಿಥಿಲಗೊಂಡಿರುವ ಕಟ್ಟಡವನ್ನು ವೀಕ್ಷಿಸಿದರು. ಜತೆಗೆ ಗ್ರಾಮದ ನೂತನ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ, ಕೋಡಂಬಳ್ಳಿ ಕೆರೆಕೋಡಿಯ ನೂತನ ರಸ್ತೆಗೂ ಚಾಲನೆ ಜತೆಗೆ ಬಾಣಂತಹಳ್ಳಿಯ ನೂತನ ರಸ್ತೆ ನಿರ್ಮಾಣಕ್ಕೂ ಭೂಮಿ ಪೂಜೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net