

ಚನ್ನಪಟ್ಟಣ : ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿರುವ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಮುಚ್ಚಯ ಕಾಮಗಾರಿಯನ್ನು ಶೀಘ್ರ ಮುಕ್ತಾಯಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ಖಾಸಗಿ ಬಸ್ ನಿಲ್ದಾಣವನ್ನು ಮಂಗಳವಾರ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗದ ತಕರಾರು, ಆರ್ಥಿಕ ಸಮಸ್ಯೆ, ನ್ಯಾಯಾಲದಲ್ಲಿರುವ ಗುತ್ತಿಗೆದಾರರ ವ್ಯಾಜ್ಯ ಸೇರಿ ನಾನಾ ಕಾರಣಗಳಿಂದ ಬಹು ನಿರೀಕ್ಷಿತ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಎಲ್ಲ ಸಮಸ್ಯೆ ನಿವಾರಣೆಗೆ ಈಗಾಗಲೇ ಕಾರ್ಯೋನ್ಮುಖವಾಗಿದ್ದೇವೆ. ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಮಾತುಕತೆ ನಡೆಸುತ್ತೇವೆ! :
ಕಳೆದ ಏಳೆಂಟು ವರ್ಷಗಳಿಂದ ಕಾಮಗಾರಿ ನೆನಗುದಿಗೆ ಬಿದ್ದಿದೆ. ಜಾಗಕ್ಕೆ ಸಂಬಂಧಿಸಿದಂತೆ ಒಂದಿಬ್ಬರು ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ರಾಮನಗರ ಹಾಗೂ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಈ ಯೋಜನೆಯನ್ನು ಕೈಗೆತ್ತುಕೊಂಡಿತ್ತು. ಆದರೆ, ಈಗ ಚನ್ನಪಟ್ಟಣ ಹಾಗೂ ರಾಮನಗರ ಪ್ರಾಧಿಕಾರಗಳು ಪ್ರತ್ಯೇಕಗೊಂಡಿವೆ. ಈ ಹಿಂದೆ ನಡೆದಿದ್ದ ಕಾಮಗಾರಿ ಹಣಕ್ಕೆ ಸಂಬಂಧಿಸಿದಂತೆ ಗುತ್ತಿದಾರರು ನ್ಯಾಯಾಲಯದಲ್ಲಿ ಮೊಕದಮ್ಮೆ ಹಾಕಿದ್ದಾರೆ. ಗುತ್ತಿದಾರರಿಗೆ 4.70 ಕೋಟಿ ರೂ. ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಗುತ್ತಿಗೆದಾರು ಮತ್ತೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಉದ್ದೇಶದಿಂದ ಉಪಮುಖ್ಯಮಂತ್ರಿಗಳು ಅವರೊಂದಿಗೆ ಮಾತುಕತೆ ನಡೆಸಿ ಪ್ರಕರಣವನ್ನು ಹಿಂದಕ್ಕೆ ತೆಗೆಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಬೇಕೆಂಬುದು ಹಲವರ ಒತ್ತಾಸೆಯಾಗದೆ. ಇದು ನಗರದ ಬಹಳ ಬಹುಪಯೋಗಿ ಜಾಗ. ಇದಕ್ಕೆ ಚಾಲನೆ ನೀಡಲು ಪ್ರಯತ್ನ ಪಡುತ್ತಿದ್ದೇವೆ. ಹೊಸ ವರ್ಷದಲ್ಲಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅವರನ್ನೇ ಕೇಳಿ!!:
ಉಪಚುನಾವಣೆ ವೇಳೆ ಚನ್ನಪಟ್ಟಣಕ್ಕೆ ಕೈಗಾರಿಕೆ ತರುವ ಕುರಿತು ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಅದನ್ನು ಕುಮಾರಸ್ವಾಮಿ ಅವರನ್ನೇ ಕೇಳಿ. ನನಗೆ ಕೇಂದ್ರ ಸರ್ಕಾರದ ಬಗ್ಗೆ ಗೊತ್ತಿಲ್ಲ. ರಾಜ್ಯ ಸರ್ಕಾರದಿಂದ ಯಾವ ಕೆಲಸ ಆಗಬೇಕೋ ಅದನ್ನು ಮಾಡಲು ಶ್ರಮಿಸುತ್ತೇನೆ ಎಂದರು.
ನಗರದ ಪ್ರವಾಸಿ ಮಂದಿರದಲ್ಲಿ ಯೋಗೇಶ್ವರ್ ಬಸ್ ನಿಲ್ದಾಣ ಕಾಮಗಾರಿ ವಿಚಾರವಾಗಿ ಅಧಿಕಾರಿಗಳ ಸಭೆ ನಡೆಸಿದರು. ಪೌರಾಯುಕ್ತ ಮಹೇಂದ್ರ. ರಾಮನಗರ ಪ್ರಾಧಿಕಾರದ ಆಯುಕ್ತ ಶಿವನಂಕರಿಗೌಡ, ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವಲಿಂಗೇಗೌಡ, ಇಂಜಿನಿಯರ್ ಜಯಣ್ಣ, ಜಲಮಂಡಳಿ ಎಇಇ ಕುಸುಮಾ, ಲೋಕೋಪಯೋಗಿ ಇಲಾಖೆ ಇಇ ಪ್ರಕಾಶ್, ನಗರಸಭೆ ಸದಸ್ಯರಾದ ವಾಸೀಲ್ ಅಲಿಖಾನ್, ಸತೀಶ್ ಬಾಬು, ರೇವಣ್ಣ, ನಾಗೇಶ್ ಇತರರು ಇದ್ದರು.
ನಗರಕ್ಕೆ ಹೊಸ ರೂಪ : ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಸವಾಲುಗಳು ನಮ್ಮ ಮುಂದಿವೆ. ನಗರಸಭೆಗೆ ನೂತನ ಕಟ್ಟಡ ಆಗಬೇಕಿದೆ. ನಗರಸಭೆಗೆ ಕಾಯಕಲ್ಪ ನೀಡುವ ಜತೆಗೆ ಇಡೀ ಚನ್ನಪಟ್ಟಣ ನಗರಕ್ಕೆ ಹೊಸ ರೂಪ ನೀಡುವ ಕೆಲಸ ಮಾಡುತ್ತೇವೆ. ಗಾಂಧಿ ಭವನ, ಪಾಲಿಟೆಕ್ನಿಕ್ ಕಟ್ಟಡ ಸೇರಿ ಹಲವು ಅಭಿವೃದ್ಧಿಯಾಗಬೇಕಿದೆ. ಇದರೊಂದಿಗೆ, ಬಹುದೊಡ್ಡ ಸಮಸ್ಯೆಯಾಗಿರುವ ಕಸ ವಿಲೇವಾರಿಗೆ ಜಾಗ ಗುರುತಿಸಲಾಗಿದ್ದು, ಅಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕಿದೆ. ನಗರದ ಯುಜಿಡಿ ಕಾಮಗಾರಿ ಸೇರಿದಂತೆ ನಾನಾ ಕೆಲಸಗಳಿವೆ. ಹಂತ-ಹಂತವಾಗಿ ಎಲ್ಲವನ್ನು ಮಾಡಲಾಗುವುದು ಎಂದ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.