

ಚನ್ನಪಟ್ಟಣ : ನಗರವನ್ನು ಸುಸಜ್ಜಿತವಾಗಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ. ನವ ಚನ್ನಪಟ್ಟಣ ನಿರ್ಮಿಸುವ ಸಂಕಲ್ಪ ಮಾಡೋಣ ಎಂದು ಚನ್ನಪಟ್ಟಣ ಕ್ಷೇತ್ರದ ಚುನಾಯಿತ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಕರೆ ನೀಡಿದರು.
ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಚನ್ನಪಟ್ಟಣ ನಗರದಲ್ಲಿ ಅಭಿವೃದ್ಧಿ ಕೊರತೆ ಕಾಡುತ್ತಿದೆ. ಈ ಹಿಂದಿನ ಶಾಸಕರ ಉದಾಸೀನದಿಂದ ನಗರದಲ್ಲಿ ಸಾಕಷ್ಟು ಮೂಲಸೌಲಭ್ಯ ಕೊರತೆಯಾಗಿದೆ. ಸಮಸ್ಯೆಗಳಿಂದ ಕೂಡಿರುವ ನಗರವನ್ನು ಸುಸಜ್ಜಿತವಾಗಿ ರಿಪೇರಿ ಮಾಡೋಣ. ಅದಕ್ಕಾಗಿಯೇ ನಾನು ಆಯ್ಕೆಯಾದ ಕೂಡಲೇ ನಗರಸಭೆಗೆ ಸಂಬಂಧಿಸಿದ ಸಭೆ ನಡೆಸುತ್ತಿದ್ದೇನೆ ಎಂದರು.
ಚನ್ನಪಟ್ಟಣದಲ್ಲಿ ಯುಜಿಡಿ ಇಲ್ಲ, ಕುಡಿಯುವ ನೀರಿನ ನಿರ್ವಹಣೆ ಇಲ್ಲ. ಇದರೊಂದಿಗೆ, ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ನಗರಸಭೆಯಲ್ಲಿ ಬಹುಪಾಲು ಕಾಂಗ್ರೆಸ್ ಬೆಂಬಲಿತ ಸದಸ್ಯರು ಇರುವ ಕಾರಣ ಅಭಿವೃದ್ಧಿಗೆ ಯಾವುದೇ ಸಮಸ್ಯೆಯಾಗದು. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೋರಂ ಇರುವ ಕಾರಣ ಎಲ್ಲರೂ ಒಗ್ಗೂಡಿ ಶ್ರಮಿಸಿದರೆ, ನಗರವನ್ನು ಅಭಿವೃದ್ಧಿ ದಾರಿಯಲ್ಲಿ ಕೊಂಡ್ಯೊಯಬಹುದು. ಸಮರೋಪಾದಿಯಲ್ಲಿ ಒಟ್ಟಿಗೆ ಅಭಿವೃದ್ಧಿ ಕಾರ್ಯ ಮಾಡೋಣ. ನಗರಕ್ಕೆ ಹೊಸರೂಪ ನೀಡುವ ಜತೆಗೆ, ನಗರಸಭೆ ಆಡಳಿತದಲ್ಲಿ ಕಾರ್ಯದಕ್ಷತೆ ಹಾಗೂ ಪಾರದರ್ಶಕತೆ ತಂದು ಮಾದರಿ ನಗರಸಭೆ ಮಾಡೋಣ ಎಂದು ಹೇಳಿದರು.
ದೂರುಗಳ ಸುರಿಮಳೆ! : ನಗರದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಕವಾಗಿ ಈ ಸಭೆ ನಡೆಸುತ್ತಿದ್ದೇನೆ. ಎಲ್ಲ ಸದಸ್ಯರು ಸಮಸ್ಯೆ ಬಗ್ಗೆ ತಿಳಿಸಿದರೆ ಅವುಗಳ ಪರಿಹಾರಕ್ಕೆ ಕೂಡಲೇ ಕಾರ್ಯಪ್ರವೃತ್ತನಾಗುತ್ತೇನೆ ಎಂದು ಯೋಗೇಶ್ವರ್ ತಿಳಿಸಿದರು. ಇದೇವೇಳೆ ಸಭೆಯಲ್ಲಿ ಸದಸ್ಯರು ನೂತನ ಶಾಸಕರ ಎದುರು ದೂರುಗಳ ಸುರಿಮಳೆ ಸುರಿಸಿದರು.
ಯುಜಿಡಿ, ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಹಲವು ಸಮಸ್ಯೆ ತೋಡಿಕೊಂಡರು. ಬೀದಿದೀಪ, ಮಟನ್ ಮಾರುಕಟ್ಟೆ, ಬೋರ್‌ವೆಲ್, ನಾಯಿಗಳ ಕಾಟ ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ನಗರಸಭೆಯಲ್ಲಿನ ಸಿಬ್ಬಂದಿ ಕೊರತೆ ಹಾಗೂ ಅಧಿಕಾರಿಗಳ ಉದಾಸೀನತೆ ಬಗ್ಗೆ ನೂತನ ಶಾಸಕರಿಗೆ ದೂರು ಸಲ್ಲಿಸಿದರು.
ಡಿ.5 ರಿಂದ ಖಾತಾ ಆಂದೋಲನ! : ನಗರದಲ್ಲಿನ ಖಾತೆ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಡಿ.5ರಂದು ಖಾತಾ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಸಿ.ಪಿ.ಯೋಗೇಶ್ವರ್ ಘೋಷಿಸಿದರು. ನಗರಸಭೆಯಲ್ಲಿ ಖಾತೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಆಂದೋಲನ ನಡೆಯಲಿದೆ. ಪ್ರತಿನಿತ್ಯ ಒಂದು ವಾರ್ಡ್‌ನಂತೆ ಆಯಾ ವಾರ್ಡ್‌ಗಳಲ್ಲಿಯೇ ಈ ಆಂದೋಲನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಾನೇ ಖುದ್ದು ಚಾಲನೆ ನೀಡಲಿದ್ದು, ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಮಸ್ಯೆಗಳು ಸಹಜ. ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾರೂ ನಿರಾಶೆಯಾಗೋದು ಬೇಡ. ಸಿಬ್ಬಂದಿ ಕೊರತೆ ನೀಗಿಸಿಕೊಂಡು ಎಲ್ಲರೂ ಅಭಿವೃದ್ಧಿಗೆ ಶ್ರಮಿಸೋಣ ಎಂದರು.