ಮಿಶ್ರ ಬೇಸಾಯ ಕೈ ತುಂಬ ಆದಾಯ

26-bidadi-1
Published on

* ರೈತ ಮಂಜುನಾಥ್ ಯಶೋಗಾಥೆ

* ಕೈ ಹಿಡಿದ ವೈಜ್ಞಾನಿಕ ಕೃಷಿ

* ಹನಿ ನೀರಾವರಿ ಅಳವಡಿಕೆ

ಚೇತನ್ ಚಕ್ಕೆರೆ ಬಿಡದಿ

ಕೃಷಿ ಮಾಡಿ ಆದಾಯ ಗಳಿಸುವುದು ಅಸಾಧ್ಯ ಎನ್ನುವಂತಿರುವ ಕಾಲಘಟ್ಟದಲ್ಲಿ ವೈಜ್ಞಾನಿಕವಾಗಿ ಬೇಸಾಯ ಮಾಡಿದರೆ ಆದಾಯ ಕಾಣಬಹುದೆಂಬುದನ್ನು ರೈತ ಮಂಜುನಾಥ್ ನಿರೂಪಿಸಿದ್ದಾರೆ.

ಹೌದು.., ಬಿಡದಿಯ ಅಂಕನಹಳ್ಳಿಯಲ್ಲಿ ಪ್ರಗತಿಪರ ರೈತ ಮಂಜುನಾಥ್ ವ್ಯವಸಾಯದ ಮೂಲಕವೇ ಸಮೃದ್ಧ ಬದುಕು ಕಟ್ಟಿಕೊಂಡಿದ್ದಾರೆ. ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಿರುವ ಇವರು ವರ್ಷದಲ್ಲಿ ಒಂದಲ್ಲ ಒಂದು ಬೆಳೆಯಲ್ಲಿ ಆದಾಯ ಕಾಣುತ್ತಿದ್ದಾರೆ.

3 ಎಕರೆ ಕೃಷಿ ಭೂಮಿ ಜತೆಗೆ ಅಕ್ಕ ಪಕ್ಕದವರ ಜಮೀನು ಗುತ್ತಿಗೆಗೆ ಪಡೆದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೊ, ಹೀರೇಕಾಯಿ, ಬದನೆಕಾಯಿ, ರಾಗಿ ಸೇರಿ ಹಲವು ಬೆಳೆಯುತ್ತಿರುವುದು ವಿಶೇಷ.

ಸಾವಯವ ಕೃಷಿಗೆ ಒತ್ತು

ಇತ್ತೀಚಿನ ದಿನಗಳಲ್ಲಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಔಷಧ ಸಿಂಪಡಣೆ ಹೆಚ್ಚಾಗಿದೆ. ಆದರೆ, ಇವರು ರಾಸಾಯನಿಕ ಗೊಬ್ಬರ ಬಳಕೆ ಬಿಟ್ಟು ಸಾವಯವ ಕಡೆಗೆ ಹೆಚ್ಚು ಒತ್ತು ನೀಡಿದ್ದಾರೆ. ಕೊಟ್ಟಿಗೆ ಗೊಬ್ಬರ ಸೇರಿ ಇನ್ನಿತರ ಜೈವಿಕ ಗೊಬ್ಬರ ಬಳಸುವ ಜತೆಗೆ ಜಿಕೆವಿಕೆಯ ವಿಜ್ಞಾನಿಗಳ ಸಲಹೆ ಪಡೆದು ಜೈವಿಕ ಔಷಧಗಳನ್ನಷ್ಟೆ ಸಿಂಪಡಣೆ ಮಾಡುತ್ತಾ ಉತ್ಕೃಷ್ಟ ಬೆಳೆ ಬೆಳೆಯುತ್ತಿದ್ದಾರೆ.

ಹನಿ ನೀರಾವರಿ ಅಳವಡಿಕೆ

ಈ ಪ್ರದೇಶ ಮಳೆಯಾಶ್ರಿತ ಪ್ರದೇಶವಾಗಿರುವ ಕಾರಣ ಬೋರ್‌ವೆಲ್ಗಳ ನೀರನ್ನೇ ಆಶ್ರಯಿಸಬೇಕಿದೆ. ಬೋರ್‌ವೆಲ್ ನೀರನ್ನು ನೇರವಾಗಿ ಹಾಯಿಸದೆ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಹೀಗೆ ಮಾಡುವುದರಿಂದ ನೀರಿನ ಬಳಕೆ ಮಿತಿಯಾಗಿ, ಗಿಡಗಳ ಬೇರಿಗೆ ನೀರು ಸಿಗುತ್ತದೆ. ವಿದ್ಯುತ್ ಅಭಾವ ಇರುವ ಕಾರಣ ರಾತ್ರಿ ವೇಳೆ ನೀರನ್ನು ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಮಾಡಿದ್ದಾರೆ.

ಹೀರೆಕಾಯಿ ಬೆಳೆ

ತೋಟಗಾರಿಕೆ ಬೆಳೆಗಳಲ್ಲಿ ಮಿಕ್ಕೆಲ್ಲ ಬೆಳೆಗಳಿಗೆ ರೋಗ-ರುಜಿನ, ಖರ್ಚು ಹೆಚ್ಚು. ಆದರೆ, ಹೀರೆಕಾಯಿ ಹಾಗಲ್ಲ. ಇದನ್ನು ಬಿತ್ತಿದ ದಿನದ 25 ದಿನ ಚೆನ್ನಾಗಿ ನೋಡಿಕೊಂಡಲ್ಲಿ ಹಾಕಿದ ಬಂಡವಾಳಕ್ಕೆನೂ ಮೋಸವಿಲ್ಲ. ಇದನ್ನು ಅರಿತ ರೈತ ಮಂಜುನಾಥ್ ಒಂದು ಎಕರೆಯಲ್ಲಿ ಹೀರೆಕಾಯಿ ಬೆಳೆಯುತ್ತಿದ್ದು, ಆದಾಯ ಗಳಿಸಿದ್ದಾರೆ. ಗಿಡ ನೆಟ್ಟ 45 ದಿನಗಳ ನಂತರ ಪ್ರತಿ ಎರಡು ದಿನಗಳಿಗೊಮ್ಮೆ ಫಸಲನ್ನು ಕಟಾವು ಮಾಡುತ್ತಾರೆ.

ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದೆ. ಬದಲಾದ ಕಾಲಘಟ್ಟದಲ್ಲಿ ಕೆಲಸ ಬಿಟ್ಟು ನನ್ನೂರಿಗೆ ಬಂದು ನನಗಿದ್ದ ಜಮೀನಿನಲ್ಲಿ ವ್ಯವಸಾಯ ಆರಂಭಿಸಿದೆ. ಹೆಚ್ಚಾಗಿ ತರಕಾರಿ ಬೆಳೆಗಳನ್ನಷ್ಟೆ ಬೆಳೆಯುತ್ತಿದ್ದೇನೆ. ತರಕಾರಿ ಬೆಳೆ ಒಂದು ಸಲ ಇದ್ದ ವ್ಯಾಪಾರ ಇನ್ನೊಂದು ಸಲ ಇರಲ್ಲ. ಹಾಗಾಗಿ ನಾನು ಟೊಮ್ಯಾಟೊ, ಹೀರೇಕಾಯಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತೇನೆ. ನಾವು ಯಾವುದೇ ಬೆಳೆ ಹಾಕಲಿ ವೈಜ್ಞಾನಿಕವಾಗಿ ಬೇಸಾಯ ಮಾಡಿದಾಗ ಮಾತ್ರ ಆದಾಯ ಬರುತ್ತದೆ. ಮಂಜುನಾಥ್, ರೈತಸಂಪರ್ಕ ಸಂಖ್ಯೆ:7337750320, ಸಂಪರ್ಕ ಸಮಯ : ಬೆಳಗ್ಗೆ 10 ರಿಂದ ಸಂಜೆ 5 ಗಂಟೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net