ಜಯದೇವ ಹೃದ್ರೋಗ ಸಂಸ್ಥೆಯಲ್ಲಿ 2,614 ಮಿಟ್ರಲ್ ಕವಾಟಗಳ ದುರಸ್ತಿ ಯಶಸ್ವಿ

Jaydeva hospital
Published on

ಬೆಂಗಳೂರು: ಸುಮಾರು 2,614 ಮಿಟ್ರಲ್ ಕವಾಟಗಳ ದುರಸ್ತಿ ಮಾಡುವ ಮೂಲಕ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಹೃದಯದ ನಾಲ್ಕು ಪ್ರಧಾನ ಕವಾಟಗಳಲ್ಲಿ ಒಂದಾದಮಿಟ್ರಲ್ ಕವಾಟದ (ಎಡ ಹೃತ್ಕರ್ಣ) ದುರಸ್ತಿ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಸಂಸ್ಥೆಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನ ಸಿಂಹ ಮೋಹನ್ ರಾವ್ ತಿಳಿಸಿದರು.

ಮಿಟ್ರಲ್ ಕವಾಟ ದುರಸ್ತಿಯ ಶತಮಾನೋತ್ಸವ ಸ್ಮರಣಾರ್ಥ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಜಯದೇವ ಮಿಟ್ರಲ್ ಶೃಂಗ ಸಭೆ - 2024’ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಿಟ್ರಲ್ ಕವಾಟ ದುರಸ್ತಿ ಮಾಡುವುದು ಸಂಕೀರ್ಣ ಪ್ರಕ್ರಿಯೆ. ಆದರೆ ಬದಲಿ ಶಸ್ತ್ರಚಿಕಿತ್ಸೆಗಿಂತ ದುರಸ್ತಿಯು ರೋಗಿಗೆ ಹೆಚ್ಚು ಅನುಕೂಲಕರವಾಗಿದೆ. ಸಂಕೀರ್ಣವಾದ ಈ ಶಸ್ತ್ರಚಿಕಿತ್ಸೆಯನ್ನು ತಂತ್ರಜ್ಞಾನ ಹಾಗೂ ತಜ್ಞ ವೈದ್ಯರ ನೆರವಿನಿಂದ ಸಂಸ್ಥೆಯಲ್ಲಿ ಮಾಡಲಾಗುತ್ತಿದೆ ಎಂದರು. ಮಿಟ್ರಲ್ ಕವಾಟ ದುರಸ್ತಿ ಆರಂಭವಾಗಿ ನೂರು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಈ ಶಸ್ತ್ರಚಿಕಿತ್ಸೆಯ ಹೊಸ ವಿಧಾನಗಳ ಕುರಿತು ಹೃದಯ ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕಡಾ.ಕೆ.ಎಸ್.ರವೀಂದ್ರನಾಥ್, ರೋಗಿಗಳ ಆರೋಗ್ಯ ಸುಧಾರಣೆಯೇ ನಮ್ಮ ಆದ್ಯತೆಯಾಗಬೇಕು. ಮಿಟ್ರಲ್ ಕವಾಟ ದುರಸ್ತಿ ಶಸ್ತ್ರಚಿಕಿತ್ಸೆಗೆ ಸಾಕಷ್ಟು ಅನುಭವ ಹಾಗೂ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ತಜ್ಞರು ಯುವ ವೈದ್ಯರಿಗೆ ಈ ವಿಧಾನದಲ್ಲಿ ಅಗತ್ಯ ಮಾರ್ಗದರ್ಶನದ ಜತೆಗೆ ತರಬೇತಿಯನ್ನು ಒದಗಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ಯಾರಿಸ್‌ನ ಪ್ರೊ. ಗಿಲ್ಲೆಸ್ ಡ್ರೇಸ್ ಮತ್ತು ಪ್ರೊ. ಪ್ಯಾಟ್ರಿಕ್ ಪೆರಿಯರ್ ಸೇರಿ ವಿವಿಧ ದೇಶಗಳ 180ಕ್ಕೂ ಅಧಿಕ ಹೃದ್ರೋಗ ತಜ್ಞರು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net