ವಿದ್ಯುತ್ ದುರುಪಯೋಗ ಶಿಕ್ಷಾರ್ಹ ಅಪರಾಧ

ವಿದ್ಯುತ್ ದುರುಪಯೋಗ ಶಿಕ್ಷಾರ್ಹ ಅಪರಾಧ
Published on

ಆಲೂರು: ವಿದ್ಯುತ್ ಕಳ್ಳತನ, ದುರುಪಯೋಗ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಹಾಸನ ಸೆಸ್ಕ್ ಜಾಗೃತದಳ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಎಂ.ವೀಣಾ ಎಚ್ಚರಿಸಿದರು.

ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹಾಸನ ಸೆಸ್ಕ್ ಜಾಗೃತ ದಳ, ಪಟ್ಟಣ ಸೆಸ್ಕ್ ಇಲಾಖೆ ಮತ್ತು ಅರಣ್ಯ ಇಲಾಖೆ, ಸರ್ಕಾರೇತರ ಸಂಸ್ಥೆ ಪ್ರಕೃತಿ ಸಂರಕ್ಷಕ ಪ್ರತಿಷ್ಠಾನ(ಎನ್‌ಸಿಎಫ್) ಸಹಯೋಗದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕಾಡಂಚಿನ ಗ್ರಾಮ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯುತ್ ಕಳ್ಳತನ ಮಾಡಿದರೆ ಕಲಂ 135 ಸೆಕ್ಷನ್ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಮೊದಲ ಬಾರಿಗೆ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ. ಪುನಾ ಅದೇ ಜಾಗದಲ್ಲಿ ಎರಡನೆ ಬಾರಿ ಪ್ರಕರಣ ಕಂಡುಬಂದಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುವುದು. ಕಾಡಂಚಿನ ಪ್ರದೇಶದಲ್ಲಿ ಸುರಕ್ಷತೆ ದೃಷ್ಟಿಗಾಗಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕಾಡುಪ್ರಾಣಿಗಳಿಗೆ ಹಾನಿ ಮಾಡುವುದು ಘೋರ ಅಪರಾಧವಾಗುತ್ತದೆ ಎಂದರು.

ಮಳೆ, ಗಾಳಿ ಇದ್ದ ಸಂದರ್ಭದಲ್ಲಿ ಮರಗಿಡಗಳು ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ತುಂಡಾಗಿರುತ್ತದೆ. ತಂತಿಯಲ್ಲಿ ವಿದ್ಯುತ್ ಪ್ರಸರಿಸುತ್ತಿರುವುದು ಕಣ್ಣಿಗೆ ಕಾಣುವುದಿಲ್ಲ. ಆಕಸ್ಮಿಕವಾಗಿ ಸ್ಪರ್ಷಿಸಿದರೆ ಕೆಲ ಸೆಕೆಂಡ್ ಸಮಯದಲ್ಲಿ ಪ್ರಾಣ ಹಾರಿ ಹೋಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಜಾಗ್ರತೆಯಿಂದ ಇರಬೇಕು. ಕಳ್ಳತನ, ದುರುಪಯೋಗದಂತಹ ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದ ಸೆಸ್ಕ್ ಜಾಗೃತದಳ ಇಲಾಖೆಗೆ ತಿಳಿಸಬೇಕು ಎಂದರು.

ಜಾಗೃತದಳದ ಸಹಾಯಕ ಇಂಜಿನಿಯರ್ ಜಗದೀಶ್ ಮಾತನಾಡಿ, ನೂತನ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ತಾತ್ಕಾಲಿಕ ಸಂಪರ್ಕ ತಪ್ಪದೆ ಪಡೆಯಬೇಕು. ಹಳೆಯ ಖಾತೆಯಿಂದ ವಿದ್ಯುತ್ ಸಂಪರ್ಕ ಪಡೆದರೆ ದುಪ್ಪಟ್ಟು ದಂಡ ಕಟ್ಟಬೇಕಾಗುತ್ತದೆ. ಮನುಷ್ಯನಿಗೆ 120-130 ವೋಲ್ಟ್ ವಿದ್ಯುತ್ ಸ್ಪರ್ಶಿಸಿದರೆ ಅಪಾಯಕ್ಕೀಡಾಗುತ್ತಾನೆ. ಆದರೆ ಕಾಡಾನೆಗಳು ದೈತ್ಯಾಕಾರವಾಗಿದ್ದರೂ ಕೇವಲ 20-30 ವೋಲ್ಟ್ ವಿದ್ಯುತ್ ಸ್ಪರ್ಶಿಸಿದರೆ ಸಾಕು ಆನೆ ಸಾವನ್ನಪ್ಪುತ್ತದೆ ಎಂದರು.

ಆಲೂರು ತಾಲೂಕಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಘವೇಂದ್ರ, ಸೆಸ್ಕ್ ಸಹಾಯಕ ಇಂಜಿನಿಯರ್ ಎನ್.ಡಿ. ಕುಮಾರ್, ದೀಪಕ್ ಮಾತನಾಡಿದರು. ಪ.ಪಂ. ಅಧ್ಯಕ್ಷೆ ತಾಹಿರಬೇಗಂ, ಪಿಎಸ್‌ಐ ಲೋಹಿತ್, ಜಾಗೃತದಳ ಸಿಬ್ಬಂದಿ ಲೋಕೇಶ್, ಆಂತೋಣಿ, ನವೀನ್, ನಿಶಾಂತ್, ವಿಜಯಕುಮಾರ್, ಶಶಿಕುಮಾರ್, ಮಮತಾ, ಎನ್.ಸಿ.ಎಫ್. ಸಂಯೋಜಕ ದೀಪಕ್‌ಭಟ್, ನಿಸಾರ್ ಅಹಮದ್, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net