ನಾಪತ್ತೆಯಾಗಿದ್ದ ವೃದ್ಧ ಶವವಾಗಿ ಪತ್ತೆ

14 RTL 03 ERAPPA KURIYVAR
Published on

ರಟ್ಟಿಹಳ್ಳಿ: ಕಾಣೆಯಾಗಿದ್ದಾನೆ ಎನ್ನಲಾಗಿದ್ದ ವೃದ್ಧ ಶವವಾಗಿ ಗ್ರಾಮದ ಮನೆಯೊಂದರ ಶೌಚಗೃಹದ ಹತ್ತಿರದ ಗುಂಡಿಯಲ್ಲಿ ಪತ್ತೆಯಾದ ಘಟನೆ ತಾಲೂಕಿನ ಕಮಲಾಪುರದಲ್ಲಿ ಬುಧವಾರ ನಡೆದಿದೆ.

ಈರಪ್ಪ ಕರಿಯಪ್ಪ ಕುರಿಯವರ (64) ಮೃತ ವ್ಯಕ್ತಿ. ಈರಪ್ಪ ಆ. 31ರಿಂದ ಕಾಣೆಯಾಗಿದ್ದಾರೆ ಎಂದು ಪತ್ನಿ ಸೆ. 3ರಂದು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ 14 ದಿನಗಳಿಂದ ಕಾಣೆಯಾಗಿದ್ದ ವೃದ್ಧ ಗ್ರಾಮದ ಗದಿಗೆಪ್ಪ ಹನುಮಂತಪ್ಪ ಸಣ್ಣತಾಯಿ ಅವರ ಮನೆಯ ಹಿಂಭಾಗದ ಶೌಚಗುಂಡಿಯ ಬಳಿಯ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ವೈದ್ಯರಿಂದ ಶವ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಅನೈತಿಕ ಸಂಬಂಧವೇ ಕೊಲೆಗೆ ಕಾರಣ: ನನ್ನ ಪತಿ ಗ್ರಾಮದ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಇದೇ ಸಿಟ್ಟಿನಿಂದ ಆ. 31ರಂದು ಆರೋಪಿಗಳಾದ ಗದಿಗೆಪ್ಪ ಸಣ್ಣತಾಯಿ, ಸುನೀಲ ಗದಿಗೆಪ್ಪ ಸಣ್ಣತಾಯಿ ಮತ್ತು ಬಸಮ್ಮ ಸಣ್ಣತಾಯಿ ಸೇರಿ ನನ್ನ ಪತಿ ಕೊಲೆ ಮಾಡಿದ್ದಾರೆ. ನಂತರ ಮನೆಯ ಹಿಂಬದಿಯಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದಾರೆ ಎಂದು ಮೃತರ ಪತ್ನಿ ಚೌಡಮ್ಮ ಕುರಿಯವರ ಬುಧವಾರ ದೂರು ದಾಖಲಿಸಿದ್ದಾರೆ. ಆರೋಪಿಗಳು ಮೂರು ದಿನದಿಂದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪಿಎಸ್​ಐ ಕೃಷ್ಣಪ್ಪ ತೋಪಿನ ತಿಳಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಅರುಣಕುಮಾರ, ಸಿಪಿಐ ಆರ್.ಆರ್. ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net