

ಪುತ್ತೂರು ಗ್ರಾಮಾಂತರ: ಗೃಣಿಯೊಬ್ಬರು ಪತಿ ಕಟ್ಟಿದ್ದ ತಾಳಿಯನ್ನು ಮನೆಯಲ್ಲಿ ಕಳಚಿಟ್ಟು ನಾಪತ್ತೆಯಾಗಿರುವ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಭಕ್ತಕ್ಕೋಡಿ ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ನಡೆದಿದೆ. ಆಕೆ ಯುವಕನೊಬ್ಬನ ಜತೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
ಸರ್ವೆ ಗ್ರಾಮದ ಕಲ್ಲಗುಡ್ಡೆ ನಿವಾಸಿ ಹರೀಶ್ ಅವರ ಪತ್ನಿ ದೀಪಿಕಾ (23) ನಾಪತ್ತೆಯಾದವರು. ದೀಪಿಕಾ ಗುರುವಾರ ಮಂಜಾನೆ ವೇಳೆಯಲ್ಲಿ ಮನೆಯಿಂದ ಕಾಣೆಯಾಗಿದ್ದಾಳೆ, ತಾಳಿಯನ್ನು ಮನೆಯಲ್ಲೇ ಬಿಚ್ಚಿಟ್ಟು ಹೋಗಿದ್ದಾಳೆ. ಮನೆಯ ವ್ಯಾಪ್ತಿಯಲ್ಲಿ ಹಾಗೂ ಸಂಬಂಧಿಕರನ್ನು ಸಂಪರ್ಕಿಸಿ ಹುಡುಕಾಡಿದರೂ ಆಕೆ ಇನ್ನೂ ಪತ್ತೆಯಾಗಿಲ್ಲ ಎಂದು ಹರೀಶ್ ಅವರು ಸಂಪ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದೀಪಿಕಾ ಮೂರು ತಿಂಗಳ ಹಿಂದೆ ಕಡಬ ಸಮೀಪದ ಕರ್ಮಾಯಿಯ ಪ್ರಶಾಂತ ಎಂಬಾತನ ಜತೆ ಹೋಗಿದ್ದು, ಬಳಿಕ ಆಕೆಯನ್ನು ಮಂಗಳೂರಿನಲ್ಲಿ ಪತ್ತೆ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು.ಮತ್ತೆ ಆಕೆ ಪ್ರಶಾಂತ್ ಜತೆ ತೆರಳಿರುವ ಶಂಕೆ ಇದೆ ಎಂದು ಪತಿ ಹರೀಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಸರ್ವೆ ಗ್ರಾಮದ ಕಲ್ಲುಗುಡ್ಡೆಯ ಹರೀಶ್ ಮತ್ತು ಕಡಬದ ದೀಪಿಕಾ ಅವರ ವಿವಾಹ ಮೂರು ವರ್ಷಗಳ ಹಿಂದೆ ನಡೆದಿತ್ತು. ವಿವಾಹದ ಬಳಿಕ ದೀಪಿಕಾ ಆಕೆಗೆ ಪ್ರಶಾಂತ್ ಎಂಬಾತನ ಪರಿಚಯವಾಗಿತ್ತು ಎಂಬ ಮಾಹಿತಿ ಲಭಿಸಿದ್ದು, ಇದೀಗ ಇವರಿಬ್ಬರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಜತೆಯಾಗಿ ತೆರಳಿರಬಹುದೆಂಬ ಶಂಕೆಗೆ ಪುಷ್ಟಿ ನೀಡಿದೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.