ವ್ಯಸನಮುಕ್ತ ಸಮಾಜದಿಂದ ದೇಶ ಅಭಿವೃದ್ಧಿ : ಶಂಕರ ರೈ ಮಾಸ್ಟರ್

de-addiction
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಸಮಾಜ ವ್ಯಸನಮುಕ್ತಗೊಂಡಾಗ ಮಾತ್ರ ದೇಶ ಸಮಗ್ರ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ, ಯಕ್ಷಗಾನ ಕಲಾವಿದ ಶಂಕರ ರೈ ಮಾಸ್ಟರ್ ತಿಳಿಸಿದ್ದಾರೆ.

ಪೆರ್ಲ ಸನಿಹದ ಇಡಿಯಡ್ಕದ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ನಡೆಯುತ್ತಿರುವ 1801ನೇ ಮದ್ಯವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು. ಮನುಷ್ಯ ತಪ್ಪು ಮಾಡುವುದು ಸಹಜ. ತಪ್ಪು ತಿದ್ದಿ ಮುನ್ನಡೆಯುವುದರಿಂದ ಜೀವನ ಸುಖಮಯವಾಗುತ್ತದೆ ಎಂದವರು ತಿಳಿಸಿದರು. ಶಿಕ್ಷಕ ಉಮೇಶ್ ಕೆ. ಪೆರ್ಲ ಶಿಬಿರಾರ್ಥಿಗಳಿಗೆ ತರಗತಿ ನಡೆಸಿದರು.

ಬುಧವಾರ ಶಿಬಿರದಲ್ಲಿ ಆರೋಗ್ಯ ತಪಾಸಣೆ- ಮಾಹಿತಿ- ಭಜನಾ ಸಂಕೀರ್ತನೆ ಜರಗಿತು. ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ಕೇಶವ ನಾಯ್ಕ ಖಂಡಿಗೆ, ಉಕ್ಕಿನಡ್ಕ ಆಯುರ್ವೇದಿಕ್ ಆಸ್ಪತ್ರೆಯ ಡಾ.ಸ್ವಪ್ನಾ ಜೆ, ಶಿಬಿರದ ಆರೋಗ್ಯ ಸಹಾಯಕಿ ನೇತ್ರಾವತಿ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆಗೈದರು. ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ, ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮನಃ ಪರಿವರ್ತನಾ ಮಾಹಿತಿ ನೀಡಿದರು.

ವಲಯ ಮೇಲ್ವಿಚಾರಕಿ ಜಯಶ್ರೀ, ಜನ ಜಾಗೃತಿ ವಲಯ ಅಧ್ಯಕ್ಷ ಬಿ.ಪಿ.ಶೇಣಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕುದ್ವ, ಉದಯ ಚೆಟ್ಟಿಯಾರ್, ವಲಯ ಒಕ್ಕೂಟದ ಅಧ್ಯಕ್ಷ ಶ್ರೀಧರ ಮಣಿಯಾಣಿ, ಬೆಂಗಪದವು ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್, ಧರ್ಮತ್ತಡ್ಕ ಒಕ್ಕೂಟದ ಅಧ್ಯಕ್ಷ ಆಶೋಕ್ ಪೆರ್ಮುದೆ, ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು ವ್ಯವಸ್ಥೆಗೆ ಸಹಕಾರ ನೀಡಿದರು. ಯೋಗ ಶಿಕ್ಷಕ ವಿಜಯ ಭಟ್ ಯೋಗಾಭ್ಯಾಸ ತರಬೇತಿ ನೀಡಿದರು. ಪೆರ್ಮುದೆ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಭಜನಾ ಸೇವೆ, ಧರ್ಮತ್ತಡ್ಕ ಒಕ್ಕೂಟದ ಜ್ಞಾನ ವಿಕಾಸದ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net