

ಸುಬ್ರಹ್ಮಣ್ಯ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ(52) ಮಂಗಳವಾರ ನಾಪತ್ತೆಯಾಗಿದ್ದು, ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 22ರಂದು ಕರ್ತವ್ಯಕ್ಕೆಂದು ತೆರಳಿದ್ದು, ಮನೆಯಲ್ಲಿ ಮೊಬೈಲ್ ಬಿಟ್ಟು ಹೋಗಿದ್ದನ್ನು ನೋಡಿ ಪತ್ನಿ ಆಸ್ಪತ್ರೆಗೆ ಮಾಹಿತಿ ನೀಡಿದಾಗ ಹೊನ್ನಪ್ಪ ಅವರು ಆಸ್ಪತ್ರೆಯಲ್ಲಿ ಸ್ಕೂಟಿಯನ್ನು ಬಿಟ್ಟು ರಜೆ ಹಾಕಿ ತೆರಳಿರುವುದಾಗಿ ಸಿಬ್ಬಂದಿ ತಿಳಿಸಿದ್ದರು. ಮಧ್ಯಾಹ್ನವಾದರೂ ಮನೆಗೆ ಬಾರದಿದ್ದುದರಿಂದ ಹುಡುಕಾಡಿದರೂ ಪತ್ತೆಯಾಗಿಲ್ಲ. ಹೊನ್ನಪ್ಪ ಅವರು ಸುಬ್ರಹ್ಮಣ್ಯ ಅಗ್ರಹಾರ ಬಳಿಯಿಂದ ಕುಮಾರಧಾರಾ ಬಳಿಗೆ ಓಡಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನದಿಗೆ ಹಾರಿರುವ ಶಂಕೆಯಲ್ಲಿ ನದಿಯಲ್ಲಿ ಹುಡುಕಾಟ ಆರಂಭಿಸಲಾಗಿದೆ. ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಸ್ಥಳೀಯರು ನದಿಯಲ್ಲಿ ಶೋಧ ಕಾರ್ಯ ನಡೆಸಿದರು. ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡವೂ ಸುಬ್ರಹ್ಮಣ್ಯಕ್ಕೆ ಆಗಮಿಸಿ ನದಿಯಲ್ಲಿ ಶೋಧ ಕಾರ್ಯ ನಡೆಸಿತು. ಆದರೆ ಯಾವುದೇ ಸುಳಿವು ಲಭಿಸಿಲ್ಲ.