ಯುಜಿಡಿ ಕಾಮಗಾರಿಯಲ್ಲಿ ಅವ್ಯವಹಾರ

04M.D.R.1
04ಎಂಡಿಆರ್1 ಮದ್ದೂರು ಪಟ್ಟಣದ ಪುರಸಭೆಯ ಎಸ್.ಎಂ .ಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಶಾಸಕ ಕೆ.ಎಂ ಉದಯ್ ಮಾತನಾಡಿದರು. ಕೋಕಿಲಾಅರುಣ್, ಟಿ.ಆರ್.ಪ್ರಸನ್ನಕುಮಾರ್, ಮೀನಾಕ್ಷಿ ಇದ್ದರು.
Published on

ಮದ್ದೂರು: ಪುರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಸಂಪರ್ಕ ಹಾಗೂ ಕುಡಿಯುವ ನೀರಿನ ಕಾಮಗಾರಿಯಲ್ಲಿ ಹಲವು ಅವ್ಯವಹಾರಗಳು ನಡೆದಿದ್ದು, ಲೋಕಾಯುಕ್ತ ಸಂಸ್ಥೆಯ ಮೂಲಕ ತನಿಖೆ ನಡೆಸುವಂತೆ ಹಿರಿಯ ಸದಸ್ಯ ಎಂ.ಐ.ಪ್ರವೀಣ್ ಒತ್ತಾಯಿಸಿದರು.

ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ ಕಳೆದ 4 ವಷರ್ಗಳಿಂದಲೂ 118 ಕೋಟಿ ರೂ. ವೆಚ್ಚದ ಕುಡಿಯುವ ನೀರು, ಯುಜಿಡಿ ಸಂಪರ್ಕ ಕಾಮಗಾರಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಇದುವರೆಗೂ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.
ಸಾಕಷ್ಟು ಅವ್ಯವಹಾರ ನಡೆದಿರುವುದಾಗಿ ಆರೋಪಿಸಿದರಲ್ಲದೆ ಕೂಡಲೇ ಕಾಮಗಾರಿಯ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿ ತನಿಖೆ ಕೈಗೊಳ್ಳುವಂತೆ ಪ್ರವೀಣ್ ಸೇರಿದಂತೆ ಇತರ ಸದಸ್ಯರು ದನಿಗೂಡಿಸಿದರು.

ಇದುವರೆಗೂ ಕಾಮಗಾರಿಯನ್ನು ಪೂರ್ಣಗೊಳಿಸದೆ ಅಧಿಕಾರಿಗಳು ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದ್ದು, ರಸ್ತೆ, ಕುಡಿಯುವ ನೀರಿನ ಕಾಮಗಾರಿ ಅಧ್ವಾನಗೊಂಡಿದ್ದು ಸ್ಥಳೀಯ ಸಾರ್ವಜನಿಕರು ಪ್ರತಿನಿತ್ಯ ಪರಿತಪಿಸುವಂತಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಮತ್ತು ಸಮರ್ಪಕ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಕೆ.ಎಂ.ಉದಯ್ ಸೂಚಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಎ.ಇ.ಇ ಬಾಬು ಸಾಬ್ ನದಾಫ್ ಅವರಿಗೆ ತುರ್ತು ಸಭೆ, ವಿಶೇಷ ಸಭೆಗಳಲ್ಲಿ ಸದಸ್ಯರು ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ದೂರಿದರಲ್ಲದೆ ತಪ್ಪಿಸಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಲೋಕಾಯುಕ್ತ ಸಂಸ್ಥೆ ಮೂಲಕ ತನಿಖೆ ಕೈಗೊಳ್ಳಬೇಕೆಂದು ಪಕ್ಷಾತೀತವಾಗಿ ಸದಸ್ಯರು ಒತ್ತಾಯಿಸಿದರು.

ಬಳಿಕ ಮಧ್ಯ ಪ್ರವೇಶಿಸಿದ ಶಾಸಕ ಕೆ.ಎಂ ಉದಯ್ ಮಾತನಾಡಿ, ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದಾಗಿ ಕೆಲ ಲೋಪ ದೋಷಗಳು ಉಂಟಾಗಿದ್ದು ಮತ್ತು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕೂಡಲೇ ಅಧಿಕಾರಿಗಳು ಕಾಮಗಾರಿ ಬಗ್ಗೆ ಸಮರ್ಪಕ ಮಾಹಿತಿಯನ್ನು ಪ್ರತಿ ಸದಸ್ಯರಿಗೂ ತಲುಪಿಸುವಂತೆ ಮುಂದಿನ ದಿನಗಳಲ್ಲಿ ವಿಶೇಷ ಸಭೆ ಕರೆದು ಸಾಧಕ ಬಾಧಕಗಳನ್ನು ಚರ್ಚಿಸುವುದಾಗಿ ಮತ್ತು ಯಾವುದೇ ಅವ್ಯವಹಾರಗಳು ನಡೆದಿದ್ದರೆ ಮುಕ್ತವಾಗಿ ತನಿಖೆ ನಡೆಸಿ ತಪ್ಪಿಸಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ: ವಾರ್ಡ್ ನಂ. 13ರ ಸಿದ್ದರಾಜು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದರಾಜು ಅವರನ್ನು ಶಾಸಕ ಕೆ.ಎಂ. ಉದಯ್, ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್ ಅಭಿನಂದಿಸಿದರು.

ಸದಸ್ಯರಾದ ಸಚಿನ್, ಬಸವರಾಜ್, ವೆಂಕಟೇಶ್, ವನಿತಾ, ಪ್ರಮೀಳಾ, ಬಿ.ಸಿ ಸರ್ವಮಂಗಳ, ಲತಾ ರಾಮು, ರತ್ನಮ,್ಮ ಸುರೇಶ್ ಕುಮಾರ್, ಕಮಲ್‌ನಾಥ್, ವೆಂಕಟೇಶ್, ನಂದೀಶ್, ಸುಮಿತ್ರಾ ರಮೇಶ್, ಶಬ್ರಿನ್ ತಾಜ್, ಮುಖ್ಯಧಿಕಾರಿ ಮೀನಾಕ್ಷಿ ಹಾಗೂ ಅಧಿಕಾರಿಗಳು ಹಾಜರಿದ್ದರು.

ರಾಜೀನಾಮೆಗೆ ಆಗ್ರಹ: ಪುರಸಭೆ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಸದಸ್ಯರು ಬಿಗಿಪಟ್ಟು ಹಿಡಿದು, ಸಭಾತ್ಯಾಗ ಮಾಡಿದ ಘಟನೆ ಪುರಸಭಾ ಸಾಮಾನ್ಯ ಸಭೆಯಲ್ಲಿ ಜರುಗಿತು.

ಟಿ.ಆರ್.ಪ್ರಸನ್ನಕುಮಾರ್ ಅವರು ಹಿಂದಿನ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಅಧಿಕಾರ ದುರುಪಯೋಗಪಡಿಸಿಕೊಂಡು ಸ್ವಂತ ನಿವೇಶವನ ಒಂದಕ್ಕೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದು, ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ಸದಸ್ಯರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net