

ಮಾಗಡಿ : ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ 50 ಲಕ್ಷ ರೂ.ಗೂ ಹೆಚ್ಚು ಅವ್ಯವಹಾರ ನಡೆದಿದ್ದು, ಸಮರ್ಪಕ ತನಿಖೆ ನಡೆಸಬೇಕು. ಇಲ್ಲದಿದ್ದರೆ ಜಿಪಂ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಕಣ್ಣೂರು ಗ್ರಾಪಂ ಅಧ್ಯಕ್ಷೆ ಮಮತಾ ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2021 ರಿಂದ ಇಲ್ಲಿಯವರೆಗೂ ಸಾಕಷ್ಟು ಅಕ್ರಮ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ಎಲ್ಲ ಅವ್ಯವಹಾರಕ್ಕೂ ಪಿಡಿಒ ಹೊಣೆಗಾರರಾಗಿದ್ದಾರೆ. ಅವರ ಬಗ್ಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ಈ ರೀತಿ ಮುಂದೆ ಯಾವ ಮಹಿಳಾ ಅಧ್ಯಕ್ಷರಿಗೂ ಶೋಷಣೆ, ಮಾನಸಿಕ ಚಿತ್ರಹಿಂಸೆ ಆಗಬಾರದು ಎಂದು ಕಣ್ಣೀರು ಹಾಕಿದರು.
15ನೇ ಹಣಕಾಸು ಯೋಜನೆಯಡಿ ಕಾಮಗಾರಿ ನಡೆಸದೆ ಬಿಲ್ಲು ಪಡೆಯಲಾಗಿದೆ. ನಾನು ಅಧ್ಯಕ್ಷೆಯಾಗುವ ಮುನ್ನ ಮಾಜಿ ಅಧ್ಯಕ್ಷರ ಡಾಂಗಲ್ ಬಳಸಿಕೊಂಡು ವಿವಿಧ ಕಾಮಗಾರಿಗಳ ಬಿಲ್ ಮಾಡಲಾಗಿದೆ. ಈ ಬಗ್ಗೆ ಜ.10 ರಂದು ಸಿಇಒ, ಎಎಸ್ ಅವರಿಗೆ ಇ - ಮೇಲ್ ಮೂಲಕ ದೂರು ನೀಡಲಾಗಿದೆ. ಆದರೂ ಯಾವುದೇ ಕ್ರಮಕೈಗೊಂಡಿಲ್ಲ. ಮತ್ತೆ ಒತ್ತಡ ಹೇರಿದ ವೇಳೆ ಫೆ.20 ರಂದು ತಾಪಂ ಅಧಿಕಾರಿಗಳು ತನಿಖೆ ನಡೆಸಿ ಫೆ.24 ರಂದು ವರದಿ ನೀಡಿದ್ದಾರೆ. ಆದರೂ ಕ್ರಮ ಕ್ರಮಕೈಗೊಳ್ಳುತ್ತಿಲ್ಲ. ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳ ಬಳಿ ತೆರಳಿದರೂ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದರು.
ಅಧಿಕೃತ ಪಿಡಿಒ ಅವರನ್ನು ಜಿಪಂಗೆ ಹಾಕಿಸಿಕೊಂಡಿದ್ದಾರೆ. ಅವರನ್ನು ಪಂಚಾಯಿತಿಗೆ ನೇಮಿಸಿ ಎಂದರೆ ನೇಮಿಸಿಲ್ಲ, ಗ್ರೇಡ್ 1 ಕಾರ್ಯದರ್ಶಿಯನ್ನು ನೇಮಕ ಮಾಡಿರುವುದೇ ಅಕ್ರಮಕ್ಕೆ ಎಡೆ ಮಾಡಿದಂತಾಗಿದೆ ಎಂದರು.
ಕಣ್ಣೂರು ಗ್ರಾಪಂ ತೀರ ಹಿಂದುಳಿದಿದೆ. ಸರ್ಕಾರದಿಂದ ಬರುವ ಅನುದಾನವೂ ದುರುಪಯೋಗವಾಗುತ್ತಿದೆ. 4 ವರ್ಷದಲ್ಲಿ 40 ಲಕ್ಷ ರೂ.ಗಳನ್ನು ಸದಸ್ಯರ ಗಮನಕ್ಕೆ ತಾರದೆ ಖರ್ಚುಮಾಡಿದ್ದಾರೆ ಎಂದು ಆರೋಪಿಸಿದರು.
ಅಕ್ರಮದ ಬಗ್ಗೆ ಪಿಡಿಒ ಅವರನ್ನು ಪ್ರಶ್ನಿಸಿದರೆ, ಶಾಸಕರ ಅಭಿವೃದ್ಧಿ ಕಾರ್ಯಕ್ರಮದ ಖರ್ಚುಗಳಿಗೆ ಬಳಸಲಾಗಿದೆ ಎನ್ನುತ್ತಾರೆ. ಆದರೆ 2 ವರ್ಷದಿಂದ ಯಾವುದೇ ಕಾರ್ಯಕ್ರಮ ನಡೆದಿಲ್ಲ, ಶಾಸಕರ ಹೆಸರು ಬಳಸಿಕೊಂಡು ತಪ್ಪಿಸಿಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ ಎಂದರು.
ಅಧ್ಯಕ್ಷರ ದೂರಿನ ಅನ್ವಯ ಪರಿಶೀಲಿಸಲಾಗಿದೆ. ಮೇಲ್ನೋಟಕ್ಕೆ ಕೆಲವೊಂದು ನಿಯಮ ಪಾಲಿಸದಿರುವ ಬಗ್ಗೆ ಕಂಡು ಬಂದಿದೆ. ಕೂಲಂಕಷವಾಗಿ ತನಿಖೆಯಾಗಬೇಕು. ಅದಕ್ಕಾಗಿ ಮುಂದಿನ ಕ್ರಮಕ್ಕೆ ಜಿಪಂಗೆ ವರದಿ ಕಳುಹಿಸಲಾಗಿದೆ. - ಜಯಪಾಲ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಅಧ್ಯಕ್ಷರ ಆರೋಪ ಸುಳ್ಳು. ಅಧ್ಯಕ್ಷರಾದವರು ಪಕ್ಷಾತೀತವಾಗಿ ನಡೆಯಬೇಕು. ಸಿಬ್ಬಂದಿಯನ್ನು ಸೌಜನ್ಯದಿಂದ ನಡೆಸಿಕೊಳ್ಳಬೇಕು. ಅವರಿಗೆ ತಿಳಿಯದಂತೆ ಬಿಲ್ ಮಾಡುವುದು ಸಾಧ್ಯವೇ?, ಆರೋಪವನ್ನು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದಮ್ಮೆ ಹೂಡಲಾಗುವುದು. - ಕಾಂತರಾಜು , ಪಿಡಿಒ