ಉದ್ಯೋಗ ಯೋಜನೆಯಲ್ಲಿ ಅವ್ಯವಹಾರ ಖಾತ್ರಿ -ಅಧಿಕಾರಿಗಳಿಗೆ ಜಿಪಂ ನೋಟಿಸ್

Screenshot_20230403-234901~2
Published on

ಸುಭಾಸ ಧೂಪದಹೊಂಡ ಕಾರವಾರ
ಉದ್ಯೋಗ ಖಾತ್ರಿ ಯೋಜನೆಯಡಿ ಜೊಯಿಡಾ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ವ್ಯತ್ಯಾಸರ ಹಣ ಭರಣ ಮಾಡುವಂತೆ ಜಿಪಂ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿದೆ.
2021-22 ಮತ್ತು 2022-23 ಸಾಲಿನ ಎರಡು ವರ್ಷದ ಅವಧಿಗೆ 1 ಲಕ್ಷರೂ. ಮೇಲ್ಪಟ್ಟ ವೆಚ್ಚದ ಉದ್ಯೋಗ ಖಾತ್ರಿ ಕಾಮಗಾರಿಗಳ ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ (ಮೂರನೇ ಸಮೀಕ್ಷಾ ತಂಡ)ವೇಳೆ ಲೋಪಗಳು ಪತ್ತೆಯಾಗಿದ್ದು, ಜಿಪಂಗೆ ನೀಡಿದ ಸಮೀಕ್ಷಾ ವರದಿಯಲ್ಲಿ ನಮೂದಿಸಲಾಗಿದೆ. ಪ್ರಮುಖವಾಗಿ ವಾಸ್ತವದಲ್ಲಿ ಆದ ಕಾಮಗಾರಿಗಿಂತ ಹೆಚ್ಚುವರಿ ತೋರಿಸಿ ಅಳತೆ ಪುಸ್ತಕ (ಎಂಬಿ)ದಲ್ಲಿ ತಪ್ಪು ಲೆಕ್ಕ ಬರೆದ ಉದಾಹರಣೆಗಳೇ ಹೆಚ್ಚಿವೆ. ಜಿಲ್ಲೆಯ ಒಂದು ತಾಲೂಕಿನ ಅಕ್ರಮದ ಸ್ಯಾಂಪಲ್ `ವಿಜಯವಾಣಿ' ಮಾಹಿತಿ ಹಕ್ಕಿನದಲ್ಲಿ ಪಡೆದ ದಾಖಲೆಗಳಿಂದ ಇವು ಬಯಲಾಗಿದೆ.
ಏನಿದು ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್..?
ಯಾವುದೇ ಸರ್ಕಾರಿ ನಿರ್ಮಾಣ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಸರ್ಕಾರ ಮಾಡಿದ ವ್ಯವಸ್ಥೆ ಇದಾಗಿದೆ. ಕಾಮಗಾರಿ ಕೈಗೊಂಡ ಗುತ್ತಿಗೆದಾರ ಹಾಗೂ ಅಧಿಕಾರಿ ಒಟ್ಟಾಗಿ ಕಳಪೆ ಮಾಡುವ ಸಾಧ್ಯತೆ ಇರುವುದರಿಂದ ತಾಂತ್ರಿಕ ಜ್ಞಾನ ಇರುವ ಮೂರನೇ ಖಾಸಗಿ ಕಂಪನಿಯೊಂದನ್ನು ನೇಮಿಸಿ ಕಾಮಗಾರಿಯ ಪರಿಶೀಲನೆ ನಡೆಸಿದ ನಂತರವೇ ಬಿಲ್ ಪಾವತಿ ಮಾಡುವ ಪದ್ಧತಿ ರೂಢಿಯಲ್ಲಿದೆ. ಕಾಮಗಾರಿ ಕೈಗೊಳ್ಳುವ ಪ್ರತಿ ಇಲಾಖೆಯೂ ಇಂಥ ಸಂಸ್ಥೆಯನ್ನು ನೇಮಿಸಿಕೊಳ್ಳುತ್ತದೆ. ಉತ್ತರ ಕನ್ನಡ ಜಿಲ್ಲೆಯ ಉದ್ಯೋಗ ಖಾತ್ರಿ ಯೋಜನೆಯ 2021-22 ಮತ್ತು 2022-23 ನೇ ಸಾಲಿನ ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ನಡೆಸುವ ಜವಾಬ್ದಾರಿಯನ್ನು ಶಿವಮೊಗ್ಗ ಮೂಲದ ಮಾನಸಾ ಗ್ರಾಮೀಣಾಭಿವೃದ್ದಿ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ.
ಏನೆಲ್ಲ ಪರಿಶೀಲನೆ…?
ಕಡತ ಮತ್ತು ಭೌತಿಕ ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ನಿರ್ವಹಿಸದೇ ಎಂಬಿ ಪುಸ್ತಕದಲ್ಲಿ ದಾಖಲೆ, ಸಾಮಗ್ರಿಗಳನ್ನು ಬಳಸದೆ ಇರುವದು, ಕಾಮಗಾರಿ ನಿರ್ವಹಿಸದೇ ಹಣ ಪಾವತಿ, ಕಾಮಗಾರಿಯ ಗುಣಮಟ್ಟ ಇತ್ಯಾದಿ ಅಂಶಗಳನ್ನು ದಾಖಲಿಸಿ ಜಿಲ್ಲಾ ಪಂಚಾಯಿತಿಗೆ ವಾಸ್ತವ ವರದಿಯನ್ನು ಸಲ್ಲಿಸಬೇಕಾಗುತ್ತದೆ. ವರದಿಯಲ್ಲಿ ಎನಾದರೂ ಅವ್ಯವಹಾರ ನ್ಯೂನ್ಯತೆಗಳು ಕಂಡು ಬಂದಲ್ಲಿ ಸಂಬಂಧಿಸಿದವರಿಂದ ವಸೂಲಿ ಅಥವಾ ಶಿಸ್ತುಕ್ರಮವನ್ನು ಜಿಲ್ಲಾ ಪಂಚಾಯಿತಿ ಕೈಗೊಳ್ಳಬೇಕಾಗುತ್ತದೆ.

ಉಳಿದ ತಾಲೂಕುಗಳ ವರದಿ ಎಲ್ಲಿ ..?
2021-22 ನೇ ಆರ್ಥಿಕ ವರ್ಷ ಮುಗಿದು ವರ್ಷವಾಗಿದೆ. ಈಗ 2022-23 ನೇ ಆರ್ಥಿಕ ವರ್ಷವೂ ಮುಗಿದಿದೆ. ಆದರೆ,ವಿಜಯವಾಣಿ' ಮಾಹಿತಿ ಹಕ್ಕಿನಡಿ ದಾಖಲೆ ಕೇಳಿದಾಗ ಜಿಪಂ ಜೊಯಿಡಾ ಹಾಗೂ ದಾಂಡೇಲಿ ತಾಲೂಕಿನ ಮಾಹಿಯನ್ನು ಮಾತ್ರ ಒದಗಿಸಿದೆ. ಅದರಲ್ಲಿ ದಾಖಲಾದ ಅವ್ಯವಹಾರಗಳ ಕೆಲವು ಸ್ಯಾಂಪಲ್ ಇಲ್ಲಿದೆ. ಉಳಿದ ತಾಲೂಕುಗಳ ವರದಿಗಳು ಏನಾದವು ಎಂಬ ಪ್ರಶ್ನೆಗಳಿಗೆ ಉತ್ತರ ದೊರಕಿಲ್ಲ.
ಅಕ್ರಮಗಳೇನು...?
*ಜೊಯಿಡಾ ತಾಲೂಕಿನ ಅಣಶಿ ಪಂಚಾಯಿತಿಯ ನುಜ್ಜಿ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ ಅಂದಾಜು 2 ಲಕ್ಷದ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. 1.55 ಲಕ್ಷ ರೂ. ವೆಚ್ಚದಲ್ಲಿ 56 ಮೀಟರ್ ಕಾಮಗಾರಿ ಮಾಡಲಾಗಿದ್ದರೆ, 80 ಮೀ ಗಟಾರ ನಿರ್ಮಾಣ ಮಾಡಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. 52, 236 ವ್ಯತ್ಯಾಸ ಕಂಡು ಬಂದಿದೆ ಎಂದು ಥರ್ಡ್ ಪಾರ್ಟಿ ವರದಿ ಹೇಳಿದೆ.
*ಅಣಶಿ ಗ್ರಾಪಂನ ವಿಶ್ವನಾಥ ದೇಸಾಯಿ ಮನೆ ಹತ್ತಿರದವರೆಗೆ ಅಂದಾಜು 3 ಲಕ್ಷ ರೂ. ವೆಚ್ಚದಲ್ಲಿ ಪಕ್ಕಾ ಗಟಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 2.56 ಲಕ್ಷ ರೂ. ವೆಚ್ಚದಲ್ಲಿ 43.5 ಮೀಟರ್ ಗಟಾರ ನಿರ್ಮಿಸಿ 70 ಮೀಟರ್ ಗಟಾರ ನಿರ್ಮಾಣ ಮಾಡಲಾಗಿದೆ ಎಂದು ತಪ್ಪು ಅಳತೆ ಬರೆದು 44,067 ಹೆಚ್ಚುವರಿ ಹಣ ಪಾವತಿಸಲಾಗಿದೆ ಎಂದು ವರದಿ ಹೇಳಿದೆ.
*ಬಜಾರಕುಣಂಗ್ ಗ್ರಾ.ಪಂನ ಪಿಸೊಸೆ ಗ್ರಾಮದಲ್ಲಿ 1.5 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ನೀರಾವರಿ ಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 1.12 ಲಕ್ಷರೂ.ಖರ್ಚು ತೋರಿಸಲಾಗಿದೆ. ಆದರೆ, ಕಾಲುವೆಗೆ ಹಾಕಿದ ಕಾಂಕ್ರಿಟ್ ದಪ್ಪ ಕಡಿಮೆಯಾಗಿದೆ. ಮತ್ತು ಎತ್ತರವನ್ನು ಕಡಿಮೆ ಮಾಡಲಾಗಿದೆ. ಆಗಿರುವ ಕಾಮಗಾರಿಗೂ ಸ್ಥಳದಲ್ಲಿ ಕಂಡಿದ್ದಕ್ಕೂ 33,930 ರೂ. ವ್ಯತ್ಯಾಸ ಕಂಡುಬಂದಿದೆ ಎಂದು ವರದಿ ತಿಳಿಸಿದೆ.
*ರಾಮನಗರ ಗ್ರಾಪಂನಲ್ಲಿ 9 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಘನ, ದ್ರವ ತ್ಯಾಜ್ಯ ಘಟಕ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 7.48 ಲಕ್ಷರೂ ಖರ್ಚು ಮಾಡಲಾಗಿದೆ. ಅದಕ್ಕೆ ಪ್ಲಾಸ್ಟರ್ 14 ಎಂಎಂ ದಪ್ಪದ ಪ್ಲಾಸ್ಟರ್ ಮಾಡಿ ಎಂಬಿ ದಾಖಲೆಯಲ್ಲಿ 20 ಎಂಎಂ ಎಂದು ತೋರಿಸಲಾಗಿದೆ. 15348 ರೂ.ವ್ಯತ್ಯಾಸ ಕಂಡುಬಂದಿದೆ ಎಂದು ದೂರಲಾಗಿದೆ. ಅಲ್ಲದೆ ಕೆಲವು ಸಾಮಗ್ರಿಗಳನ್ನು ಇದರಲ್ಲಿ ಬಳಸದೇ ಬಳಸಿರುವ ಬಗ್ಗೆ ವರದಿಯಲ್ಲಿ ತೋರಿಸಲಾಗಿದೆ.ಅದರಲ್ಲೂ 31,908 ವ್ಯತ್ಯಾಸವಾಗಿದೆ ಎಂದು ವರದಿ ಹೇಳಿದೆ.
ಶಿಂಗರಗಾಂವ್ ಗ್ರಾಪಂ ಆಮಶೇತ ಗೌಳಿವಾಡದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಜಾನು ಶಳಕೆ ಮನೆಯಿಂದ ಕಾಲುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು 72 ಸಾವಿರ ರೂ. ಖರ್ಚು ಮಾಡಲಾಗಿದೆ. ಕಾಲುವೆ ಗೋಡೆಯನ್ನು 97 ಮೀ. ಕಟ್ಟಲಾಗಿದೆ ಆದರೆ, 115 ಮೀ. ಎಂದು ಎಂಬಿ ದಾಖಲಿಸಲಾಗಿದೆ. 18,021 ರೂ. ವ್ಯತ್ಯಾಸ ಕಂದು ಬಂದಿದೆ. ಅದೇ ಗ್ರಾಪಂನ ಶಿಂಗರಗಾಂವ್ ಗ್ರಾಪಂ ಕಚೇರಿಯ ಎದುರು 2 ಲಕ್ಷ ರೂ. ಅಂದಾಜು ವೆಚ್ಚದ ಕಾಂಕ್ರಿಟ ರಸ್ತೆ ನಿರ್ಮಾಣಕ್ಕೆ 1.90 ಲಕ್ಷರೂ ಖರ್ಚು ಮಾಡಲಾಗಿದೆ. ಜಲ್ಲಿ ಕೋರಸ್ ಎಗ್ರಿಗೇಟ್ (ನಿರ್ದಿಷ್ಠ ಗಾತ್ರದ ಜಲ್ಲಿ) ಬಳಸಿಲ್ಲ. ಆದರೆ, ಬಳಸಲಾಗಿದೆ ಎಂದು ಖರ್ಚು ತೋರಿಸಿ ಹಣ ಪಾವತಿಸಲಾಗಿದೆ. ಅದರಲ್ಲಿ 26226 ರೂ. ವ್ಯತ್ಯಾಸ ಕಂಡುಬಂದಿದೆ.
ನಂದಿಗದ್ದೆ ಗ್ರಾಪಂ ವ್ಯಾಪ್ತಿಯ ನಂದಿಗದ್ದೆ ಕನ್ನಡ ಶಾಲೆಗೆ ಕಂಪೌಂಡ ಗೋಡೆಯ ಕಾಮಗಾರಿಯನ್ನು 1.5 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. 1.12 ಲಕ್ಷರೂ ಕಾಮಗಾರಿ ಮಾಡಿ ಬಿಲ್ ಪಾವತಿಯಾಗಿದ್ದು, ಸ್ಥಳದಲ್ಲಿ ಪ್ಲಾಸ್ಟರ್ ಮಾಡದೇ ಮಾಡಲಾಗಿದೆ ಎಂದು ಬರೆದು ಹಣ ಪಡೆಯಲಾಗಿದೆ. 15371 ರೂ. ವ್ಯತ್ಯಾಸವಾಗಿದೆ ಎಂದು ವರದಿ ಹೇಳಿದೆ.

………..
ಥರ್ಡ್ ಪರ್ಟಿ ಇನ್ಸ್ಪೆಕ್ಷನ್ ಕೊಂಚ ವಿಳಂಬವಾಗಿದೆ. ಈಗ ಕೆಲವು ತಾಲೂಕುಗಳ ವರದಿ ಬಂದಿದೆ. ಜೊಯಿಡಾ ತಾಲೂಕಿನ ವರದಿಯಲ್ಲಿ ಉಂಟಾಗಿರುವ ವ್ಯತ್ಯಾಸಗಳ ಬಗ್ಗೆ ಸಂಬಂಧಪಟ್ಟವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ವ್ಯತ್ಯಾಸದ ಹಣವನ್ನು ಭರಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೂಕ್ತ ನಿರ್ದೇಶನ ಕೋರಿ ಸರ್ಕಾರಕ್ಕೂ ಪ್ರತಿ ರವಾನೆ ಮಾಡಲಾಗಿದೆ.
ಡಿ.ಎಂ.ಜಕ್ಕಪ್ಪಗೋಳ
ಜಿಪಂ ಉಪ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net