ಗುಡಿಬಂಡೆ: ದೇಶದಲ್ಲಿ ಬಡತನ ನಿರ್ಮೂಲನೆ ಸೇರಿ ಇತರ ಉದ್ದೇಶಗಳಿಂದ ಬಡವರಿಗೆ ಅನುಕೂಲವಾಗಬೇಕೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್‌ಆರ್‌ಎಲ್‌ಎಂ) ಅನುದಾನವನ್ನು ತಾಲೂಕು ಮೇಲ್ವಿಚಾರಕ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ರಾಮೀಣ ಭಾಗದಲ್ಲಿ ಬಡತನ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಎನ್‌ಆರ್‌ಎಲ್‌ಎಂ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಒಕ್ಕೂಟ ರಚಿಸಿ, ಅಧ್ಯಕ್ಷರನ್ನು ನೇಮಕ ಮಾಡಿ ಗ್ರಾಪಂ ವ್ಯಾಪ್ತಿಯ ಸ್ವ-ಸಹಾಯ ಗುಂಪುಗಳ ಮಹಿಳೆಯರ ಸಬಲೀಕರಣಕ್ಕೆ ಸಾಲ ಸೌಲಭ್ಯ ನೀಡುವುದು ಸೇರಿ ಇತರ ಉದ್ದೇಶ ಈಡೇರಿಸುವುದು ಈ ಯೋಜನೆ ಉದ್ದೇಶ. ಆದರೆ, ಈಗ ಈ ಯೋಜನೆಯಡಿ ಸಾಲ ನೀಡುವ ವಿಷಯದಲ್ಲಿ ತಾಲೂಕು ಮೇಲ್ವಿಚಾರಕ ಮತ್ತು ಕೆಲ ವಲಯ ಮೇಲ್ವಿಚಾರಕರು ಸೇರಿ ಒಂದೇ ಸಂಘಕ್ಕೆ ಅನೇಕ ಬಾರಿ ಸಾಲ ನೀಡಿ, ಸಾಲದ ಹಣವನ್ನು ಮಹಿಳೆಯರಿಗೆ ನೀಡದೆ ತಾಲೂಕು ಮೇಲ್ವಿಚಾರಕನ ಪತ್ನಿಯ ಹೆಸರಿಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಕೊಂಡಿದ್ದಾರೆ. ಸ್ವಲ್ಪ ಹಣವನ್ನು ವಲಯ ಮೇಲ್ವಿಚಾರಕಿ ಖಾತೆಗೆ ಜಮಾ ಮಾಡಿ, ಅವರಿಂದ ಸ್ವಲ್ಪ ಹಣ ನಗದು ರೂಪದಲ್ಲಿ, ಇನ್ನಷ್ಟು ಹಣವನ್ನು ಪೋನ್‌ಪೇ ಮೂಲಕ ಪಡೆದಿದ್ದಾರೆ. ಈ ರೀತಿ 12 ಲಕ್ಷ ರೂ.ಗಳಿಗೂ ಹೆಚ್ಚು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಒಕ್ಕೂಟದ ಅಧ್ಯಕ್ಷರಿಗೆ ತಿಳಿಯದಂತೆ ಹಣ ವರ್ಗಾವಣೆ
ಒಕ್ಕೂಟದ ಅಧ್ಯಕ್ಷೆ ಮತ್ತು ಪ್ರತಿನಿಧಿಗಳಿಂದ ಮುಂಗಡವಾಗಿ ಚೆಕ್‌ಗಳಿಗೆ ತಾಲೂಕು ಮೇಲ್ವಿಚಾರಕ ಸಹಿ ಹಾಕಿಸಿಕೊಂಡು ಚೆಕ್‌ಬುಕ್ ಇಟ್ಟುಕೊಂಡಿದ್ದು, ವಲಯ ಮೇಲ್ವಿಚಾರಕಿ ಹೆಸರಿಗೆ ಚೆಕ್ ಬರೆದು ನಂತರ ಖಾತೆಗೆ ಜಮಾ ಮಾಡಿಕೊಂಡು ಮತ್ತೆ ವಲಯ ಮೇಲ್ವಿಚಾರಕಿಯಿಂದ ನಗದು ರೂಪದಲ್ಲಿ ಹಣ ಪಡೆದುಕೊಂಡು ಈಗ ನನಗೆ ಏನು ಗೊತ್ತಿಲ್ಲ, ನಾನು ತಪ್ಪು ಮಾಡಿಲ್ಲ ಎಂದು ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ತಾಲೂಕು ಮೇಲ್ವಿಚಾರಕ ಎಲ್ಲ ದೂರುಗಳು ಅಧ್ಯಕ್ಷೆ ಮತ್ತು ವಲಯ ಮೇಲ್ವಿಚಾರಕಿ ವಿರುದ್ಧ ತಿರುಗುವಂತೆ ಮಾಡಿದ್ದಾನೆ ಎನ್ನಲಾಗಿದೆ.
ಒಂದೇ ಸಂಘಕ್ಕೆ 6 ಬಾರಿ ಸಾಲ
ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಒಕ್ಕೂಟದಿಂದ ಒಂದೇ ಸಂಘಕ್ಕೆ ಸುಮಾರು 6 ಬಾರಿ ಸಾಲ ನೀಡಿದ್ದು, ಸಾಲದ ಹಣವನ್ನು ದಪ್ಪರ್ತಿ ವಲಯ ಮೇಲ್ವಿಚಾರಕಿಯ ಖಾತೆಗೆ ಜಮಾ ಮಾಡಿಕೊಂಡು, ಅವರಿಂದ ಮತ್ತೆ ತಾಲೂಕು ಮೇಲ್ವೀಚಾರಕ ಸುಮಾರು 11 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾನೆ ಎಂಬುದು ಸೇರಿ ಇತರ ವಿಷಯಗಳ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾಲೂಕು ಮೇಲ್ವಿಚಾರಕ ಯಾವುದೇ ಸಭೆ ನಡೆಸದೆ ಹಾಗೂ ಸರಿಯಾದ ಮಾಹಿತಿ ನೀಡದೆ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡು ಒಕ್ಕೂಟದಿಂದ ಸಂಘದ ಖಾತೆಗೆ ಜಮಾ ಮಾಡಿಸಿಕೊಂಡು ಮತ್ತೆ ಸಂಘದಿಂದ ಹಣ ಪಡೆದುಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ. ಆದರೆ ಈಗ ಎಲ್ಲರೂ ನಮ್ಮ ಮೇಲೆ ಬರುತ್ತಿದ್ದಾರೆ. ಸರಿಯಾಗಿ ಓದು ಬರಹ ಬರದ ನಮ್ಮ ಮೇಲೆ ದೂರು ನೀಡಿರುವುದು ಸರಿಯಲ್ಲ. ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. - ಎಸ್.ಎನ್. ಸರಸ್ವತಮ್ಮ, ದಪ್ಪರ್ತಿ ಚೌಡೇಶ್ವರಿ ಸಂಜೀವಿನ ಗ್ರಾಪಂ ಒಕ್ಕೂಟದ ಅಧ್ಯಕ್ಷೆ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಎನ್‌ಆರ್‌ಎಲ್‌ಎಂ ಯೋಜನೆ ಅನುಷ್ಠಾನ ಮಾಡಿದೆ. ಆದರೆ ಯೋಜನೆ ತಾಲೂಕು ಮೇಲ್ವಿಚಾರಕ ಲಕ್ಷಾಂತರ ಹಣ ಅವ್ಯವಹಾರ ಮಾಡಿದ್ದಾರೆ. ಕೂಡಲೇ ತನಿಖೆ ಮಾಡಿ ಹಣ ದುರುಪಯೋಗ ಮಾಡಿಕೊಂಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಿ. - ಜಿ.ವಿ.ಗಂಗಪ್ಪ, ದಲಿತ ಸಂಘಟನೆ ಜಿಲ್ಲಾ ಸಂಚಾಲಕ, ಗುಡಿಬಂಡೆ ನಾನು ಯಾವುದೇ ಹಣ ದುರುಪಯೋಗ ಮಾಡಿಲ್ಲ. ಈ ಬಗ್ಗೆ ದಾಖಲೆ ಗಳಿದ್ದರೆ ನೀಡಿ. -ಹರೀಶ್, ಎನ್‌ಆರ್‌ಎಲ್‌ಎಂ ತಾಲೂಕು ಮೇಲ್ವಿಚಾರಕ