ಮೌಢ್ಯ ಬಿತ್ತುವ ಪವಾಡಗಳು ಬಟಾಬಯಲು

25Rajesh1
Published on

 ಚಾಮರಾಜನಗರ: ಮೂಢನಂಬಿಕೆಗಳನ್ನು ಗಟ್ಟಿಗೊಳಿಸುವ ಪವಾಡಗಳು ಕಣ್ಣೆದುರೇ ಬಟಾಬಯಲಾದವು. ಮೌಢ್ಯವನ್ನು ಬಿತ್ತುವ ಆಚರಣೆಗಳನ್ನು ಪ್ರಶ್ನಿಸುವ ವೈಚಾರಿಕತೆ ಬೆಳೆಸಿಕೊಳ್ಳಬೇಕೆಂಬುದು ಮನದಟ್ಟಾಯಿತು.

ನಗರದ ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ನಂಬಿಕೆ ಮತ್ತು ಮೌಢ್ಯತೆ(ಪ್ರಾತ್ಯಕ್ಷಿಕೆ) ಮತ್ತು ಪವಾಡಗಳ ಅನಾವರಣ ಕಾರ್ಯಕ್ರಮ ಇದಕ್ಕೆ ವೇದಿಕೆಯಾಯಿತು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಪವಾಡಗಳನ್ನು ಎಳೆ ಎಳೆಯಾಗಿ ಬಯಲು ಮಾಡಿದರು.

ಕಾಲೇಜಿನ ವಿದ್ಯಾರ್ಥಿನಿ ಸಂಧ್ಯಾಳನ್ನು ಒಳಗೊಂಡು ಪ್ರಾತ್ಯಕ್ಷಿಕೆ ಪ್ರದರ್ಶನ ಮಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಇಷ್ಟು ದಿನ ಪವಾಡಗಳನ್ನು ನಂಬಿದ್ದ ವಿದ್ಯಾರ್ಥಿಗಳಲ್ಲಿ ಬೆರುಗು ಮೂಡಿತು. ಪವಾಡದ ಹಿಂದಿನ ಸತ್ಯದ ದರ್ಶನವಾಯಿತು. ಮೂಢನಂಬಿಕೆಗಳಿಗೆ ಒಳಗಾಗಬಾರದು ಎಂಬ ಅರಿವಾಯಿತು.

ಡಾ.ಹುಲಿಕಲ್ ನಟರಾಜ್ ಮಾತನಾಡಿ, ನಂಬಿಕೆ ಮತ್ತು ಮೂಢನಂಬಿಕೆ ನಡುವೆ ವ್ಯತ್ಯಾಸವನ್ನು ಅಂತಿಮ ಲಿತಾಂಶದಿಂದ ತಿಳಿಯಲು ಸಾಧ್ಯ. ವಿದ್ಯಾರ್ಥಿಗಳು ಪಠ್ಯದ ಹುಳುಗಳಾಗಬೇಡಿ. ದೇವರು, ತಂದೆ-ತಾಯಿ ಹಣೆಬರಹ ಬರೆಯಲ್ಲ. ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳಬೇಕು. ವಿದ್ಯಾರ್ಥಿ ಜೀವನ ಕಠಿಣ ಶ್ರಮದ ಜೀವನ. ಈಗ ಶ್ರಮವಹಿಸದೆ ಇದ್ದರೆ ಮುಂದೆ ಭಿಕ್ಷುಕರಾಗಬೇಕಾಗುತ್ತದೆ. ಮೊಬೈಲ್, ಚಾಟಿಂಗ್, ಧಾರಾವಾಹಿ, ಕೆಟ್ಟ ಸಿನಿಮಾ, ಕ್ರಿಕೆಟ್ ವೀಕ್ಷಣೆಯನ್ನು ನಿಯಂತ್ರಿಸಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಲ್ಲಿ ಕಠಿಣ ಸಮಯ ಪಾಲನೆ, ಧನಾತ್ಮಕ ಆಲೋಚನೆ, ಶಿಸ್ತು, ಸಂಯಮ ಇರಬೇಕು. ವಿಜ್ಞಾನದ ಬೆಳವಣಿಗೆ ವೇಗವಾಗಿದೆ. ಮನುಷ್ಯನ ಅಂಗಾಂಗಗಳನ್ನೇ ಅಳವಡಿಕೆ ಮಾಡಲಾಗುತ್ತಿದೆ. 200 ವರ್ಷಗಳ ಬಳಿಕ ಮನುಷ್ಯನಿಗೆ ಸಾವೇ ಇಲ್ಲ ಎನ್ನುವಂತಾಗಿದೆ. ಐಷಾರಾಮಿ ಜೀವನ, ದೇಹಾಲಂಕಾರ ಹೆತ್ತ ಮಗುವಿಗೆ ತಾಯಿಹಾಲು ಸಿಗದಂತೆ ಮಾಡುತ್ತಿದೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದ ಮಾತನ್ನು ಈ ಸಮಾಜ ಮೈಗೂಡಿಸಿಕೊಂಡಿದ್ದರೆ ಇಂದು ಪೊಲೀಸ್ ಠಾಣೆಗಳೇ ಇರುತ್ತಿರಲಿಲ್ಲ. ವಿಜ್ಞಾನಿ, ವಿದ್ಯಾವಂತರಾದರೇನು ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳಬೇಕು. ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಬೇಕು. ವೈಚಾರಿಕತೆ ಸಾರುವುದೆಂದರೆ ಯಾಕೆ ಆಚರಣೆ ಮಾಡಬೇಕು. ಇದರಿಂದ ಆಗುವ ಉಪಯೋಗವೇನೆಂದು ಪ್ರಶ್ನೆ ಮಾಡುವುದೇ ವೈಚಾರಿಕತೆ. ಸಮಾಜಕ್ಕೆ ವಿದ್ಯಾವಂತರು, ಬುದ್ಧಿವಂತರಿಗಿಂತ ಪ್ರಜ್ಞಾವಂತರ ಅಗತ್ಯವಿದೆ ಎಂದರು.

ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕಿರಣ್ ರಾಜ್, ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲ ಡಾ.ಮಹದೇವಸ್ವಾಮಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net