

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಅಪರಾಧ ಪ್ರಕರಣಗಳಲ್ಲಿ ಅಪ್ರಾಪ್ತರು ಸಹ ಭಾಗಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯ ಬಾಲ ನ್ಯಾಯ ಮಂಡಳಿಯು ಮಹತ್ವದ ಆದೇಶವೊಂದನ್ನು ನೀಡಿದೆ.
ಅಪ್ರಾಪ್ತರು ಕ್ರೈಂ ಮಾಡಿದ್ರೆ ಬಾಲಪರಾಧ ಅಡಿಯಲ್ಲಿ ಕಡಿಮೆ ಶಿಕ್ಷೆ ಅಥವಾ ಶಿಕ್ಷೆಯಿಂದ ಪಾರಾಗಬಹುದು ಎಂಬ ಯೋಚನೆ ಇದ್ದರೆ ಇಂದಿಗೆ ಬಿಟ್ಟುಬಿಡಿ. ಏಕೆಂದರೆ, ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಆರೋಪಿಗಳಿಗೂ ವಯಸ್ಕರಂತೆ ವಿಚಾರಣೆ ನಡೆಸುವಂತೆ ಮಂಡ್ಯ ಬಾಲ ನ್ಯಾಯ ಮಂಡಳಿ ಅಧ್ಯಕ್ಷೆ ಹಾಗೂ ನ್ಯಾಯಾಧೀಶೆ ಮಾಲಾ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಮಂಡ್ಯದಲ್ಲಿ ಇತ್ತೀಚೆಗೆ ನಡೆದಿದ್ದ 4 ಅಪರಾಧ ಪ್ರಕರಣಗಳ ಆರೋಪಿಗಳ ವಿಚಾರದಲ್ಲಿ ನ್ಯಾಯ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಕ್ರೈಂನಲ್ಲಿ ಭಾಗಿಯಾಗಿದ್ದ ಅಪ್ರಾಪ್ತರನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸಲು ಅನುಮತಿ ನೀಡಲಾಗಿದೆ.
ಅಕ್ಟೋಬರ್ 31ರಂದು ಮಂಡ್ಯದಲ್ಲಿ ಸುಮಂತ್ ಎಂಬಾತನ ಭೀಕರ ಕೊಲೆಯಲ್ಲಿ ಇಬ್ಬರು ಅಪ್ರಾಪ್ತರು ಭಾಗಿಯಾಗಿದ್ದರು. ಡಿ.12ರಂದು ಮದ್ದೂರು ತಾಲೂಕಿನ ಹುರುಗಲವಾಡಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಭಾಗಿಯಾಗಿದ್ದ. ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿಯಲ್ಲಿ ಮಾವನನ್ನು ಬರ್ಬರವಾಗಿ ಅಪ್ರಾಪ್ತ ಕೊಲೆ ಮಾಡಿದ್ದ. ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ಮತ್ತು ಡಾಕಾಯಿತಿ ಪ್ರಕರಣದಲ್ಲೂ ಓರ್ವ ಅಪ್ರಾಪ್ತ ಭಾಗಿಯಾಗಿದ್ದ.
ಇದಿಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಪ್ರಾಪ್ತರ ವಿಚಾರದಲ್ಲಿ ನ್ಯಾಯ ಮಂಡಳಿ ಮಹತ್ವದ ಆದೇಶ ನೀಡಿದ್ದು, ಅಪ್ರಾಪ್ತರಿಗೆ ಒಂದು ರೀತಿಯಲ್ಲಿ ಎಚ್ಚರಿಕೆ ಗಂಟೆಯಾಗಿದೆ. (ದಿಗ್ವಿಜಯ ನ್ಯೂಸ್)