ಜಿಲ್ಲೆಯ ಒಡನಾಡಿಗಳಾದ ಇಬ್ಬರಿಗೆ ಮಂತ್ರಿ ಸ್ಥಾನ

Published on

* ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

ಗಂಗಾಧರ್ ಬೈರಾಪಟ್ಟಣ ರಾಮನಗರ

ಸತತ ಮೂರನೇ ಬಾರಿಗೆ ಪ್ರಧಾನಿ ಆಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಸಂಪುಟದಲ್ಲಿ ಜಿಲ್ಲೆಯಲ್ಲಿ ಒಡನಾಟ ಹೊಂದಿರುವ ಇಬ್ಬರಿಗೆ ಮಂತ್ರಿ ಸ್ಥಾನ ದೊರೆತಿರುವುದು ಜಿಲ್ಲೆಯ ಸಂತಸ ಹೆಚ್ಚಿಸಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿ ಈಗ ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದರಾಗಿರುವ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸಚಿವರಾದರೆ, ಪಕ್ಕದ ತುಮಕೂರು ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿರುವ ವಿ.ಸೋಮಣ್ಣ ರಾಮನಗರ ಜಿಲ್ಲೆಯವರು ಎಂದರೆ ಅಚ್ಚರಿ ಪಡಬೇಕಿಲ್ಲ.

ಮಂತ್ರಿಗಳ ಇತಿಹಾಸವೇ ಇದೆ :

ರಾಮನಗರ ಜಿಲ್ಲೆ ರಾಜ್ಯಕ್ಕೆ ಮಂತ್ರಿ, ದೇಶಕ್ಕೆ ಪ್ರಧಾನ ಮಂತ್ರಿಯನ್ನು ನೀಡಿದ ಹೆಗ್ಗಳಿಕೆ ಹೊಂದಿದೆ. ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ನೀಡಿದ ಜಿಲ್ಲೆ. ಅದೇ ರೀತಿ ದೇಶದ ಪ್ರಧಾನಿ ಆಗಿ ಸೇವೆ ಮಾಡಿದ ಏಕೈಕ ಕನ್ನಡಿಗ ಎಚ್.ಡಿ.ದೇವೇಗೌಡರು ರಾಮನಗರದಿಂದ ಗೆದ್ದು, ಮುಖ್ಯಮಂತ್ರಿ ಆಗಿದ್ದ ವೇಳೆಯೇ ಅವರಿಗೆ ಪ್ರಧಾನಿ ಆಗುವ ಅವಕಾಶ ಒದಗಿಬಂದಿತ್ತು.

ಇದೇ ರೀತಿ ಬೆಂಗಳೂರು, ನಂತರ ಕನಕಪುರ ಈಗ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಭಾಗವಾಗಿರುವ ರಾಮನಗರ ಜಿಲ್ಲೆಯಲ್ಲಿ ಹಲವು ಮಂದಿ ಕೇಂದ್ರದ ಮಂತ್ರಿಯೂ ಆಗಿದ್ದಾರೆ. ಇವರಲ್ಲಿ ಕೆಂಗಲ್ ಹನುಮಂತಯ್ಯ ಮೊದಲಿಗರು, 1962, 1967, 1971ರಲ್ಲಿ ಬೆಂಗಳೂರು, ಬೆಂಗಳೂರು ನಗರ ಲೋಕಸಭೆ ಕ್ಷೇತ್ರಗಳಲ್ಲಿ ಸಂಸದರಾಗಿ ಕಾರ್ಯನಿರ್ವಹಿಸಿದ್ದ ಅವರು, ಕೇಂದ್ರದ ರೈಲ್ವೆ, ಕೈಗಾರಿಕೆ ಸೇರಿ ಹಲವು ಪ್ರಮುಖ ಇಲಾಖೆಗಳನ್ನು ಮಂತ್ರಿಯಾಗಿ ಮುನ್ನಡೆಸಿದ ಕೀರ್ತಿ ಹೊಂದಿದ್ದರು.

ಇವರ ನಂತರ 1971ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಸೇವೆ ಸಲ್ಲಿಸಿದ್ದ ಸಿ.ಕೆ. ಜಾರ್ ಷರೀಪ್ ಅವರು 1980ರಲ್ಲಿ ಇಂದಿರಾ ಗಾಂಧಿ ಸಂಪುಟದಲ್ಲಿ ರೈಲ್ವೆ ಮಂತ್ರಿ ಆಗಿದ್ದರು. 1952ರಲ್ಲಿ ಅಂದಿನ ಬೆಂಗಳೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಈಗಿನ ಹಾರೋಹಳ್ಳಿ ತಾಲೂಕಿನ ಮರಳವಾಡಿಯ ಎಂ.ವಿ.ರಾಜಶೇಖರನ್ 2004ರಲ್ಲಿ ಮನಮೋಹನ್ ಸಿಂಗ್ ಸಂಪುಟದಲ್ಲಿ ಯೋಜನಾ ಖಾತೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು.

ಇದಾದ ನಂತರ ಕನಕಪುರ ಕ್ಷೇತ್ರವನ್ನು ಹೆಚ್ಚು ಬಾರಿ ಪ್ರತಿನಿಧಿಸಿದ್ದ ಕೀರ್ತಿಯನ್ನು ಹೊಂದಿರುವ ಎಂ.ವಿ ಚಂದ್ರಶೇಖರ ಮೂರ್ತಿ ಅವರು ಹಣ ಕಾಸು ಖಾತೆ ರಾಜ್ಯ ಸಚಿವರಾಗಿದ್ದರು. ಬಹುತೇಕ ದಶಕದ ನಂತರ ಜಿಲ್ಲೆಯ ಇಬ್ಬರಿಗೆ ಕೇಂದ್ರದಲ್ಲಿ ಮಂತ್ರಿ ಯೋಗ ದೊರೆತಿದೆ.

ಜಿಲ್ಲೆಯ ನಂಟು:

hdk

ಎಚ್.ಡಿ.ಕುಮಾರಸ್ವಾಮಿ ಅವರು 1996ರಲ್ಲಿ ಒಮ್ಮೆ ಕನಕಪುರದಿಂದ, 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಆಯ್ಕೆಗೊಂಡು ಸಂಸದರಾಗಿದ್ದರು. ಈಗ ಮಂಡ್ಯ ಸಂಸದರಾಗಿ ಆಯ್ಕೆಗೊಂಡು ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ. ಇವರಿಗೆ ರಾಜಕೀಯ ಜನ್ಮ ನೀಡಿದ್ದು ರಾಮನಗರ ಜಿಲ್ಲೆ. ರಾಮನಗರದಿಂದ 2004ರಲ್ಲಿ ಶಾಸಕರಾಗಿ ಆಯ್ಕೆಗೊಂಡು 2006ರಲ್ಲಿ ರಾಜ್ಯದ ಸಿಎಂ ಆದರು. ನಂತರ 20018ರಲ್ಲಿ ಚನ್ನಪಟ್ಟಣದ ಶಾಸಕರಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದರು.

ವಿ ಸೋಮಣ್ಣ ಅವರು ಜಿಲ್ಲೆಯಲ್ಲಿ ರಾಜಕೀಯ ಮಾಡಿಲ್ಲ ಎನ್ನುವುದು ಬಿಟ್ಟರೆ ಅವರ ಸ್ವ-ಗ್ರಾಮ ಇರುವುದು ಮರಳವಾಡಿಯಲ್ಲಿ. ಅವರು ಮರಳವಾಡಿ ಹೋಬಳಿಯ ಯಲವನಾಥ ಗ್ರಾಮದವರಾಗಿದ್ದು, ಈಗಲೂ ತಮ್ಮ ಸ್ವ-ಗ್ರಾಮದ ಒಡನಾಟ ಹೊಂದಿದ್ದಾರೆ.

ಪ್ರಧಾನಿ ಆದ ಎಚ್‌ಡಿಡಿ

ಸತತ ಸೋಲುಗಳು ರಾಜಕೀಯ ಜೀವನವನ್ನು ಮುಗಿಸಿಯೇ ಬಿಟ್ಟಿದೆ ಎನ್ನುವ ಹೊತ್ತಿಗೆ ಎರಡು ಬಾರಿ ದೇವೇಗೌಡರ ಕೈ ಹಿಡಿದಿದ್ದು ರಾಮನಗರ ಜಿಲ್ಲೆ.

1989ರಲ್ಲಿ ಸೋಲು ಕಂಡಿದ್ದ ಎಚ್.ಡಿ.ದೇವೇಗೌಡರ ರಾಜಕೀಯ ಜೀವನ ಮುಗಿದೇ ಹೋಯಿತು ಎನ್ನುವ ಹೊತ್ತಿಗೆ, 1994ರಲ್ಲಿ ರಾಮನಗರದಿಂದ ವಿಧಾನಸಭೆಗೆ ಸ್ಪರ್ಧೆ ಮಾಡಿದ ದೇವೇಗೌಡರಿಗೆ ಇಲ್ಲಿನ ಜನ ಅದ್ಭುತ ಜಯ ನೀಡುವ ಜೊತೆಗೆ, ಸಿಎಂ ಆಗಲು ನೈತಿಕ ಬಲವನ್ನು ನೀಡಿದ್ದರು. ಅಂತೆಯೇ ಸಿಎಂ ಆದ ದೇವೇಗೌಡರಿಗೆ ಪ್ರಧಾನ ಮಂತ್ರಿ ಆಗುವ ಅವಕಾಶವೂ ಒದಗಿ ಬಂದು, 11 ತಿಂಗಳ ಕಾಲ ದೇಶದ ಪ್ರಧಾನಿ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net