

ಬಾಗಲಕೋಟೆ: ನೇಹಾ ಹಿರೇಮಠ ಹತ್ಯೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ಸದ್ಯ ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಗಲಕೋಟೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದ್ದು, ಇದೇ ರೀತಿ ನಮ್ಮ ಸಹೋದರಿಗೆ ಆದ್ರೆ ನಾವು ಸುಮ್ಮನಿರ್ತೀವಾ? ಅವನು ಯಾವನೇ ಆಗಿರಲಿ ಶಿಕ್ಷೆಯಾಗಬೇಕು ಎಂದರು.
ಮಾತು ಮುಂದುವರಿಸಿದ ಸಚಿವರು, ನಮ್ಮ ನಾಡಿನಲ್ಲಿ ಕಾನೂನಿದೆ. ಇವರು ಅಧಿಕಾರದಲ್ಲಿ ಇದ್ದಾಗ ಇಂತ ಎಷ್ಟೋ ಪ್ರಕರಣ ಆಗಿವೆ.
ಗುಜರಾತ್ನಲ್ಲಿ ಒಂದೇ ದಿನ ಆರು ಘಟನೆ ಆಗಿದ್ದವು. ನಾವು ಹೇಳ್ತೇವೆ, ತಪ್ಪು ಮಾಡಿದ್ದು ಯಾರೇ ಆಗಲಿ, ಯಾವನೇ ಇರಲಿ ಶಿಕ್ಷೆ ಆಗಬೇಕು.
ಇವತ್ತು ಮುಸ್ಲಿಂ ಸಂಘಟನೆಯವರು ಪ್ರತಿಭಟನೆ ಮಾಡ್ತಿದ್ದಾರೆ. ತಪ್ಪು ಮಾಡಿದ್ದು ಯಾವುನೇ ಇದ್ದರೂ ಶಿಕ್ಷೆ ಆಗಲೇಬೇಕು ಎಂದರು.
ಕೊರೊನಾದಲ್ಲಿ ಸತ್ತಾಗ ಮುಸ್ಲಿಂ ಹುಡುಗರು ಶವ ಸಂಸ್ಕಾರ ಮಾಡಿದ್ದಾರೆ. ಇಂತಹ ಅನ್ಯೋನ್ಯ ಸಂಬಂಧ ಇರುವಾಗ, ಯಾವುನೋ ಒಬ್ಬ ಕಿಡಗೇಡಿ ತಪ್ಪು ಮಾಡಿದಾಗ ತಕ್ಕ ಶಿಕ್ಷೆ ಆಗಬೇಕು. ಅಧಿಕಾರದ ಲಾಲಸೆಗಾಗಿ ಕೋಮುವಾದದ ಚಾಲು ಮಾಡೋದು, ಇವರ ಎಲ್ಲ ಪ್ರತಿಭಟನೆಗಳು ಅಧಿಕಾರದ ಲಾಲಸೆಗಾಗಿ ಮಾತ್ರ. ಪ್ರಧಾನಿ ಮೋದಿಯವರೆ ಐಪಿಸಿ ಕೋಡ್ ತಿದ್ದುಪಡಿ ತನ್ನಿ. ಹೌದಪಾ, ನಿಮಗೆ ಹೆಣ್ಮಕ್ಕಳ ಬಗ್ಗೆ ಗೌರವವಿದೆ ಅಂತ ಹೇಳಬಹುದು. ಓಣಿಯಲ್ಲಿ ಚಿಲ್ಲರೆ ಜಗಳ ಹಚ್ಚುವರು ಕಾನೂನು ತರಬೇಕು. ಮಣಿಪುರದಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿದ್ರಲ್ಲ, ಆ ಮಣಿಪುರ ಘಟನೆ ಬಗ್ಗೆ ಪ್ರಧಾನಿ ಬಾಯಿ ಬಿಡ್ತಿಲ್ಲ ಏಕೆ? ಅವಳು ಹೆಣ್ಣು ಮಗಳು ಅಲ್ಲವೇನು? ಎಂದು ಹೇಳಿದರು.
ಗುಂಪುಗಳಲ್ಲಿ ಮಹಿಳೆಯ ಗೌರವ ತೆಗೆಯುವ ಕೆಲಸ ಮಾಡಿದ್ರೆ, ನಮ್ಮ ದೇಶದ ಪ್ರಧಾನಿಗೆ ಅದರ ಬಗ್ಗೆ ಗಮನವೇ ಇಲ್ಲ. ಈ ದೇಶದ ಪ್ರಧಾನಿಗೆ ಲಂಗು ಲಗಾಮು ಇಲ್ಲದೇ ಮಾತಾಡಿದರೆ ಅವರಿಗೆ ಗೌರವ ಬರುತ್ತಾ? ಲವ್ ಜಿಹಾದ್ ಏನದು? ಅಶೋಕ ಸಿಂಗಾಲ್ ಮಗಳು ಮದುವೆ ಆಗಿದ್ದು ಅಬ್ಬಾಸ್ ಜೊತೆ! ಮುರಳಿ ಮನೋಹರ ಜೋಷಿ ಮಗಳು ಶಹಜಾನ್ ಹುಸೇನ್ ಜೊತೆ ಮದುವೆ. ಲಾಲಕೃಷ್ಣ ಅಡ್ವಾಣಿ ಮಗಳು ಅಲ್ತಾಫ್ ಹುಸೇನ್ ಜೊತೆ ವಿವಾಹವಾದಳು. ಸುಬ್ರಹ್ಮಣ್ಯ ಸ್ವಾಮಿ ಮಗಳು ನದೀ ಹೈದರ್ ಮದುವೆಯಾದರು. ಪ್ರವೀಣ ತೊಗಾಡಿಯಾ ಮಗಳು ಮುಸ್ಲಿಂ ಹುಡುಗನನ್ನು ಮದುವೆ ಆಗ್ತಾಳೆ,
ಇದಕ್ಕೆ ಲವ್ ಜಿಹಾದ್ ಅನ್ನಬೇಕಾ? ಎಂದು ಪ್ರಶ್ನಿಸಿದರು.
ಇವರು ಮುಸ್ಲಿಂ ಹುಡುಗರನ್ನು ಹಿಂದುಗಳಾಗಿ ಕನ್ವಾರ್ಟ್ ಮಾಡಿದ್ದಾರೋ ಅಥವಾ ಇವರು ಮುಸ್ಲಿಂಗೆ ಕನ್ವರ್ಟ್ ಆಗಿದ್ದಾರೋ?
ಇದರ ಬಗ್ಗೆ ಬಾಯಿ ಬಿಡ್ತಿಲ್ಲ ಯಾಕೆ? ಓಣಿಯಲ್ಲಿನ ಹುಡುಗರಾದ್ರೆ ಲವ್ ಜಿಹಾದ್ ಅಂತೀರಿ, ನಿಮ್ಮ ನಾಯಕರ ಮಕ್ಕಳದ್ದು ಲವ್ ಜಿಹಾದೋ ಅಥವಾ ಅವರನ್ನೇ ಕನ್ವರ್ಟ್ ಮಾಡಲು ಹೋಗಿದ್ದಾರೋ? ಅದಕ್ಕ್ಯಾಕೆ ನಿಮ್ಮಲ್ಲಿ ಉತ್ತರ ಇಲ್ಲ ಎಂದು ಪ್ರಶ್ನಿಸಿದರು.
ನೇಹಾ ಹಾಗೂ ಫಯಾಜ್ ಪ್ರೀತಿ ಮಾಡಿದ್ದು ಸತ್ಯ. ಅವರಿಬ್ಬರು ಪರಸ್ಪರ ಪ್ರೀತಿ ಮಾಡ್ತಿದ್ದರು. ಇದು ಸತ್ಯ ಎಂಬುದು ಗೃಹಸಚಿವರ ಗಮನಕ್ಕೆ ಬಂದಿತ್ತು. ಅದಕ್ಕೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದರು. ನಂತರ ಸಂಪೂರ್ಣ ಮಾಹಿತಿ ಪಡೆದು ಹೇಳೋದಾಗಿ ಹೇಳಿದ್ದಾರೆ, ಅದರಲ್ಲಿ ಏನು ತಪ್ಪು? ನಾನು ಹೇಳ್ತಿನಿ ಅವರಿಬ್ಬರು ಲವ್ ಮಾಡ್ತಿದ್ದರು. ನೇಹಾ ಹಿರೇಮಠ ಪ್ರಕರಣದಲ್ಲಿ ಆರಂಭದಲ್ಲೇ ಗೃಹಸಚಿವ ಡಾ. ಪರಮೇಶ್ವರ್ ಹೇಳಿಕೆ ಸಮರ್ಥಿಸಿಕೊಂಡ ಸಚಿವ ತಿಮ್ಮಾಪುರ, ತನಿಖೆ ಸಂಪೂರ್ಣವಾದ ಬಳಿಕ ಎಲ್ಲ ಮಾಹಿತಿ ಕೊಡುತ್ತೇವೆ ಎಂದು ಹೇಳಿದ್ದಾರೆ.