

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಂಗ್ರೆಸ್ ವರಿಷ್ಠರು, ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಲಿತರ ಪರ ಕಿಂಚಿತ್ತು ಕಾಳಜಿ ಇದ್ದರೆ ಅಕ್ರಮವಾಗಿ ದಲಿತರ ಭೂಮಿ ಕಬಳಸಿ ಮತ್ತೆ ದಲಿತ ಕುಟುಂಬದವರ ಮೇಲೆಯೇ ದೌರ್ಜನ್ಯ ಎಸಗಿರುವ ಸಚಿವ ಡಿ. ಸುಧಾಕರ್ ಅವರ ರಾಜಿನಾಮೆ ಪಡೆಯಬೇಕು ಮತ್ತು ಇದಕ್ಕೆ ಸಾತ್ ನೀಡಿದ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ದೌರ್ಜನ್ಯಕ್ಕೊಳಗಾದ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮತ್ತು ಮಾಧ್ಯಮ ಸಂಚಾಲಕ ಶಿವ ಅಷ್ಟಗಿ ಅಗ್ರಹಿಸಿದರು.
ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ಮರ್ಯಾದ ಹತ್ಯೆಗಳು ಹೆಚ್ಚುತ್ತಿವೆ. ದಲಿತ ಸಮುದಾಯದವರೇ ಗೃಹ ಸಚಿವರಾಗಿದ್ದರು ದಲಿತರ ಮೇಲಿನ ದೌರ್ಜನಗಳು ಹೆಚ್ಚಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸೋಮವಾರ ತಿಳಿಸಿದರು..
ಇದರ ಬಗ್ಗೆ ಕೆಲ ದಲಿತ ಸಂಘಟನೆಗಳು ಮೌನ ವಹಿಸಿರುವುದು ಖಂಡನೀಯವಾಗಿದೆ. ಈ ಹಿಂದೆ ದಲಿತ ಸಮುದಾಯದ ಬಗ್ಗೆ ಜಾತಿ ನಿಂದನೆ ಮಾಡಿದ ಸಚಿವ ಮಲ್ಲಿಕಾರ್ಜುನ್ ಮತ್ತು ಚಿತ್ರನಟ ಉಪೇಂದ್ರ ಅವರ ವಿರುದ್ಧ ಎಫ್ಐಆರ್ ಆಗಿದ್ದರೂ ಕೂಡ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ದಲಿತ ವಿರೋಧಿ ನಡೆಯಾಗಿದೆ ಎಂದು ದೂರಿದರು.
ಸಂವಿಧಾನ ವಿರೋಧಿ ನಡೆ:
ರಾಜ್ಯದ ಎಲ್ಲ ಬಗೆಯ ಜನರಿಗೆ ನ್ಯಾಯವಾದುದನ್ನೆ ಮಾಡುತ್ತೇನೆಂದು ಸಂವಿಧಾನದ ಹೆಸರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ದಲಿತರನ್ನು ಜಾತಿ ನಿಂದನೆ ಮಾಡುವುದು, ದಲಿತರ ಆಸ್ತಿ ಕಬಳಿಸುವುದು ಮತ್ತು ಮಹಿಳೆಯರು ಮೇಲೆ ದೌರ್ಜನ್ಯ ಎಸಗುತ್ತಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಸಂವಿಧಾನದ ವಿರುದ್ಧವಾಗಿ ನಡೆಯುತ್ತಿರುವ ಸಚಿವರನ್ನು ಸ್ವತಃ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರೇ ಸಮರ್ಥಿಸಿಕೊಳ್ಳುತ್ತಿರುವುದು ತೀವ್ರವಾಗಿ ಖಂಡಿಸುತ್ತೇವೆ.
ದಲಿತರಿಗೆ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
Highlight
ದಲಿತಪರ ಎಂದು ಹೇಳುವ ಕಾಂಗ್ರೆಸ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವರ ವಿರುದ್ಧ ಆರೋಪ ಬಂದ ತಕ್ಷಣ ಕಾಂಗ್ರೆಸ್ ಪ್ರತಿಭಟನೆ ಮಾಡಿ ರಾಜಿನಾಮೆ ಆಗ್ರಹಿಸುತ್ತಿತ್ತು ಆದರೆ ಇಂದು ದಲಿತರ ಮೇಲೆ ದೌರ್ಜನ್ಯ, ಭೂ ಕಬಳಿಕೆ, ಜಾತಿ ನಿಂದನೆ ಮಾಡಿರುವ ಸಚಿವರ ಮೇಲೆ ಎಫ್ಐಆರ್ ದಾಖಲಾದರೂ ಸಮರ್ಥಿಸಿಕೊಳ್ಳುತ್ತಿರುವುದು ಸಂವಿಧಾನದ ವಿರೋಧಿ ನಡೆ ಖಂಡಿನೀಯ.