ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ವಿಚಾರ, ‘ಪಿಪಿಪಿ’ ಮಾದರಿ ಪ್ರಸ್ತಾವನೆ ಕೈಬಿಡಿ ಎಂದ ಸಚಿವ ಶಿವಾನಂದ ಪಾಟೀಲ

VJP SHIVANANDA PATIL
Published on

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಸಂಬಂಧಿಸಿದಂತೆ ‘ಪಿಪಿಪಿ ಮಾದರಿ’ಯ ಪ್ರಸ್ತಾವನೆ ಕೈಬಿಡಬೇಕೆಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಒತ್ತಾಯಿಸಿದ್ದಾರೆ.

ಈ ಹಿಂದೆ ಆರೋಗ್ಯ ಸಚಿವನಾಗಿದ್ದಾಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಿಸಿದ್ದೆ. ಆಗ ಪಿಪಿಪಿ ಮಾದರಿ ಇರಲಿಲ್ಲ. ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಉದ್ದೇಶಿಸಲಾಗಿತ್ತಲ್ಲದೇ ಬಜೆಟ್‌ನಲ್ಲಿ ಅನುದಾನ ಸಹ ಮೀಸಲಿಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಅದನ್ನು ಪಿಪಿಪಿ ಮಾದರಿ ಎಂದು ಸೇರ್ಪಡೆಗೊಳಿಸಿದ್ದು, ಕೂಡಲೇ ಆ ಮಾದರಿ ಕೈಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ವಿಜಯಪುರ ಜಿಲ್ಲಾಸ್ಪತ್ರೆ ರಾಜ್ಯದಲ್ಲೇ ಅತೀ ದೊಡ್ಡ ಆಸ್ಪತ್ರೆಯಾಗಿದ್ದು ವಿಶಾಲ ಜಾಗೆ ಹೊಂದಿದೆ. ಅತ್ಯುತ್ತಮ ಆಸ್ಪತ್ರೆ ಎಂದು ರಾಜ್ಯಮಟ್ಟದ ಪ್ರಶಸ್ತಿಗೂ ಭಾಜನವಾಗಿದೆ. ಈ ಮೊದಲು ಜಿಲ್ಲೆಯ ಬಡವರು ವೈದ್ಯಕೀಯ ಸೌಲಭ್ಯಗಳಿಗಾಗಿ ಮಹಾರಾಷ್ಟ್ರದ ಸಾಂಗಲಿ, ಜತ್ತ, ಮೀರಜ್‌ಗಳಿಗೆ ಹೋಗುತ್ತಿದ್ದರು. ಇದನ್ನು ಅರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಕಷ್ಟು ಅನುದಾನ ಒದಗಿಸಿದೆ. ಆಗ ಜಾರಿ ಮಾಡಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ಹಾಗೂ ಕ್ಯಾನ್ಸರ್ ಚಿಕಿತ್ಸಾ ಘಟಕ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಕ್ಕೆ ಬಂದಿಲ್ಲ. ಅಂದು ಸ್ಥಾಪಿಸಿದ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರ ರಾಜ್ಯದಲ್ಲೇ ಮಾದರಿಯಾಗಿದೆ. ಉದ್ಯಾನ, ನೀರಿನ ಸೌಲಭ್ಯ, ಆಯುರ್ವೇದ ಆಸ್ಪತ್ರೆಗಳು...ಹೀಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಬೇಕಾದ ಎಲ್ಲ ವಾತಾವರಣ ನಿರ್ಮಾಣಗೊಂಡಿದೆ ಎಂದರು.

ನಾನು ಆರೋಗ್ಯ ಸಚಿವನಾಗಿ ಮಂಜೂರಿಸಿದ ಯೋಜನೆ ಎಂಬ ಕಾರಣಕ್ಕಾಗಿಯೋ ಏನೋ ಕೆಲವರು ಅದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳಿಸುತ್ತಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಲ್ಲೂ ಮನವಿ ಮಾಡುವೆ. ಯಾರದ್ದಾದರೂ ಹೆಸರು ಹಾಕಲಿ, ಯಾರೇ ಕ್ರೆಡಿಟ್ ತೆಗೆದುಕೊಳ್ಳಲಿ, ಬಡವರ ಕಲ್ಯಾಣಕ್ಕಾಗಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಆರಂಭಿಸಲಿ ಎಂದರಲ್ಲದೇ ಈ ಭಾಗದ ಸಂಸದರಿಗೂ ಪತ್ರ ಬರೆಯಲಿದ್ದು ಗೋಳಗುಮಟ್ಟವಂತೂ ಕಟ್ಟಲಾಗುವುದಿಲ್ಲ ಕನಿಷ್ಠ ಪಕ್ಷ ‘ಏಮ್ಸ್’ ಆದರೂ ತನ್ನಿ ಎಂದು ಮನವಿ ಮಾಡುವುದಾಗಿ ತಿಳಿಸಿದರು.

ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗಾಗಿ ಎಲ್ಲ ಪ್ರಯತ್ನಗಳೂ ಮುಗಿದಿದ್ದು ಇದೀಗ ಸಂಘರ್ಷ ಅನಿವಾರ್ಯವಾದರೆ ಅದಕ್ಕೂ ಸಿದ್ದ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net