ಪ್ರಗತಿ ಪಥದತ್ತ ವಿಡಿಸಿಸಿ ಬ್ಯಾಂಕ್, ರಾಜ್ಯದಲ್ಲೇ ಮಾದರಿ-ರಾಷ್ಟ್ರದಲ್ಲೇ ಮುಂಚೂಣಿ, ಸಚಿವ ಶಿವಾನಂದ ಪಾಟೀಲರಿಂದ ಸಂತಸ-ಹೆಮ್ಮೆ ವ್ಯಕ್ತ

SSP PRESS MEET
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸಚಿವ ಶಿವಾನಂದ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ನಿರಂತರ 27 ವರ್ಷಗಳ ಕಾಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದ್ದು ಮಾತ್ರವಲ್ಲದೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೇ ಮಾದರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ವಿಡಿಸಿಸಿ ಭಾಜನವಾಗಿಸಿದ್ದಾಗಿ ಬ್ಯಾಂಕ್‌ನ ಅಧ್ಯಕ್ಷರೂ ಆಗಿರುವ ಸಚಿವ ಶಿವಾನಂದ ಪಾಟೀಲ ಸಂತೃಪ್ತಿ ಮತ್ತು ಹೆಮ್ಮೆ ವ್ಯಕ್ತಪಡಿಸಿದರು.

1919ರಲ್ಲಿ ಸ್ಥಾಪನೆಯಾಗಿ 106 ವರ್ಷಗಳ ಕಾಲ ಸೇವೆ ಪೂರ್ಣಗೊಳಿಸಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದೀಗ 107ನೇ ವರ್ಷಕ್ಕೆ ಕಾಲಿರಿಸಿದೆ. 1997ರಿಂದ 2025ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಲೇ ಇದ್ದು, ಈ ಅವಧಿಯಲ್ಲಿ ಒಟ್ಟು 233.68 ಕೋಟಿ ರೂ. ಲಾಭ ಗಳಿಸುವ ಮೂಲಕ ಬ್ಯಾಂಕ್ ನಿರಂತರವಾಗಿ ಲಾಭದತ್ತ ಹೆಜ್ಜೆ ಇರಿಸಿದೆ. ಪ್ರಸಕ್ತ ಸಾಲಿನಲ್ಲಿ ಸ್ವಂತ ಬಂಡವಾಳ 58 ಕೋಟಿ ಮತ್ತು 319 ಕೋಟಿ ಠೇವಣಿ ಹೆಚ್ಚಾಗಿದೆ. 2024-25ನೇ ಸಾಲಿನಲ್ಲಿ 4701 ಕೋಟಿ ರೂ.ಇದ್ದ ದುಡಿಯುವ ಬಂಡವಾಳ 4902 ಕೋಟಿಯಾಗಿದ್ದು 201 ಕೋಟಿ ಹೆಚ್ಚಳವಾಗಿದೆ. 25.18 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಬ್ಯಾಂಕ್‌ನ ಇತಿಹಾಸದಲ್ಲೇ ದಾಖಲೆ ಬರೆದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಸಂತಸ ಹಂಚಿಕೊಂಡರು.

ಬ್ಯಾಂಕ್ ಬೆಳೆದು ಬಂದ ಬಗೆ

ಬ್ಯಾಂಕ್ ವಿಭಜನೆಗೊಂಡಾಗ ವಿಜಯಪುರ ಜಿಲ್ಲೆಯಲ್ಲಿ ಬ್ಯಾಂಕ್‌ನ 25 ಶಾಖೆಗಳಿದ್ದು, 2003ರಿಂದ 2025ರವರೆಗೆ 26 ಹೊಸ ಶಾಖೆ ಆರಂಭಿಸಲಾಗಿದೆ. ಪ್ರಸ್ತುತ 51 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. 1919ರಲ್ಲಿ 63 ಸಾವಿರ ದುಡಿಯುವ ಬಂಡವಾಳದೊಂದಿಗೆ ಆರಂಭಗೊಂಡ ಬ್ಯಾಂಕ್ ಇದೀಗ 4902 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 1997-98ರಿಂದ 2024-25ರವರೆಗೆ ಒಟ್ಟು 17077 ಕೋಟಿ ರೂ. ಬೆಳೆ ಸಾಲ, 587 ಕೋಟಿ ರೂ. ಮಧ್ಯಮಾವಧಿ ಕೃಷಿ ಸಾಲ ಸೇರಿದಂತೆ ಒಟ್ಟು 17664 ಕೋಟಿ ರೂ. ಕೃಷಿ ಸಾಲ ನೀಡಲಾಗಿದೆ. ರಾಜ್ಯದಲ್ಲಿ ಕೃಷಿಗಾಗಿ ಗರಿಷ್ಠ ಸಾಲ ನೀಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ವಿಡಿಸಿಸಿ ಮೂರನೇ ಸ್ಥಾನದಲ್ಲಿದೆ. ಕೃಷಿಯೇತರ ಉದ್ದೇಶಗಳಿಗೂ ಸಾಲ ನೀಡಲಾಗುತ್ತಿದ್ದು, 1273 ಕೋಟಿ ರೂ. ಸಾಲ ಬಾಕಿ ಇದೆ. 33 ಸಕ್ಕರೆ ಕಾರ್ಖಾನೆಗಳಿಗೆ 1682 ಕೋಟಿ ಸಾಲ ನೀಡಿದ್ದು, 2024-25ನೇ ವರ್ಷಾಂತ್ಯಕ್ಕೆ 23 ಕಾರ್ಖಾನೆಗಳಿಂದ 716 ಕೋಟಿ ರೂ. ಸಾಲ ಬರುವುದು ಬಾಕಿ ಇದೆ ಎಂದರು.

ರಾಜ್ಯದಲ್ಲೇ ಮುಂಚೂಣಿ ಬ್ಯಾಂಕ್

2003-04ರಿಂದ ಬಡ್ಡಿ ಸಹಾಯಧನ ಯೋಜನೆಯಡಿ ಕೃಷಿ ಸಾಲ ವಿತರಿಸಲಾಗುತ್ತಿದ್ದು, ಈವರೆಗೆ 16407 ಕೋಟಿ ರೂ.ಬೆಳೆ ಸಾಲ ಮತ್ತು 554 ಕೋಟಿ ರೂ.ಮಧ್ಯಮಾವಧಿ ಕೃಷಿ ಸಾಲ ನೀಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ರೈತರಿಗೆ ಒಟ್ಟು 1500 ಕೋಟಿ ರೂ. ಬಡ್ಡಿ ಸಹಾಯಧನ ಪಡೆಯಲು ನೆರವಾಗಿದೆ. ಬ್ಯಾಂಕ್‌ನ ನಿವೃತ್ತ ನೌಕರರ ಹಿತದೃಷ್ಠಿಯಿಂದ ಸ್ಥಾಪಿಸಿದ ಪಿಂಚಣಿ ಟ್ರಸ್ಟ್ ಮೂಲಕ 9.75 ಕೋಟಿ ಅನುದಾನ ಒದಗಿಸಲಾಗಿದೆ. ಪ್ರಸ್ತುತ 122 ನಿವೃತ್ತ ನೌಕರರು ಮಾಸಿಕ 5 ಸಾವಿರ ರೂ. ಪಿಂಚಣಿ ಪಡೆಯುತ್ತಿದ್ದಾರೆ. ಒಟ್ಟು 47.97 ಕೋಟಿ ರೂ.ಆಸ್ತಿ ನಿರ್ಮಿಸಿದ್ದು,ಪ್ರಸ್ತುತ ಬ್ಯಾಂಕ್‌ನ ಆಸ್ತಿಯ ಪ್ರಸಕ್ತ ಮಾರುಕಟ್ಟೆಯ ಬೆಲೆ ಅಂದಾಜು 100 ಕೋಟಿ ರೂ.ಮೀರಲಿದೆ. ಆಡಿಟ್‌ನಲ್ಲಿ ಸತತವಾಗಿ ‘ಅ’ವರ್ಗದಲ್ಲಿ ಮುಂದುವರಿದಿದೆ. ನಬಾರ್ಡ್‌ನಿಂದ ರಾಷ್ಟ್ರ ಮಟ್ಟದ ಪ್ರಶಸ್ತಿ, ಅಪೆಕ್ಸ್ ಬ್ಯಾಂಕ್ ನೀಡುವ ವಾರ್ಷಿಕ ಪ್ರಶಸ್ತಿ, ಬ್ಯಾಂಕೋ ಸಂಸ್ಥೆ ವಿಶಿಷ್ಟ ಸಾಧನೆಗಾಗಿ ನೀಡುವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ದೇಶದಲ್ಲಿ ಒಟ್ಟು 351 ಡಿಸಿಸಿ ಬ್ಯಾಂಕ್‌ಗಳಿದ್ದು ರಾಜ್ಯದಲ್ಲಿ 21 ಬ್ಯಾಂಕ್‌ಗಳಿವೆ. ಆ ಪೈಕಿ ವಿಜಯಪುರ ಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದರು.

ಮುಂದಿನ ಯೋಜನೆಗಳು

ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಸಹಕಾರಿ ತರಬೇತಿ ಕೇಂದ್ರ ಸ್ಥಾಪಿಸುತ್ತಿರುವುದಾಗಿ ತಿಳಿಸಿದ ಶಿವಾನಂದ ಪಾಟೀಲರು ಆ ಕುರಿತ ವಿಡಿಯೋ ದೃಶ್ಯಾವಳಿ ಪ್ರದರ್ಶಿಸಿದರು. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ವಿಜಯಪುರದಲ್ಲಿಯೇ ಇಂಥದ್ದೊಂದು ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಅಂದಾಜು ವೆಚ್ಚ 85 ಕೋಟಿ ಪೈಕಿ 50 ಕೋಟಿ ರೂಪಾಯಿ ಈಗಾಗಲೇ ಮೀಸಲಿಡಲಾಗಿದೆ ಎಂದರು.

ಬಹುತೇಕ ರೈತರು ಜಮೀನಿನಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದು ತೋಟದ ಮನೆಗಳಿಗೂ ಸಾಲ ನೀಡುವ ಮಾದರಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಎನ್‌ಎ ಇಲ್ಲದಿದ್ದರೂ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲು 15-20 ಲಕ್ಷ ರೂಪಾಯಿ ಸಾಲ ನೀಡಲಾಗುವುದು. 2025-26ನೇ ಸಾಲಿನಲ್ಲಿ ಒಟ್ಟು 4160 ಕೋಟಿ ರೂ. ಠೇವಣಿ ಹಾಘೂ ಒಟ್ಟು 3640 ಕೋಟಿ ರೂ.ಸಾಲಗಳೊಂದಿಗೆ ಒಟ್ಟು 7800 ಕೋಟಿ ರೂ.ವ್ಯವಹರಿಸಲು ಗುರಿ ಹೊಂದಿದೆ. ಬ್ಯಾಂಕ್‌ನ ದುಡಿಯುವ ಬಂಡವಾಳವನ್ನು 4902 ಕೋಟಿಯಿಂದ 5400 ಕೋಟಿಗೆ ಹೆಚ್ಚಿಸಲು ಯೋಜನೆ ಹೊಂದಿದ್ದು, 26 ಕೋಟಿ ರೂಪಾಯಿ ಲಾಭ ಗಳಿಸುವ ಗುರಿ ಹೊಂದಲಾಗಿದೆ. ಅಲ್ಲದೇ 2 ಸಾವಿರ ಕೋಟಿ ಬೆಳೆ ಸಾಲ, 100 ಕೋಟಿ ಮಧ್ಯಮಾವಧಿ ಕೃಷಿ ಸಾಲ ಹಾಗೂ 1270 ಕೋಟಿ ಕೃಷಿಯೇತರ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net