

ಕುಂದಗೋಳ: ಮಳೆಯಿಂದ ಹಾನಿಗೊಳಗಾದ ಕುಂದಗೋಳ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಶುಕ್ರವಾರ ಕಾರ್ವಿುಕ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ, ಹಾನಿಗೊಳಗಾದ ಮನೆ, ಜಮೀನು, ರಸ್ತೆ ಹಾಗೂ ಸೇತುವೆಗಳನ್ನು ಪರಿಶೀಲನೆ ನಡೆಸಿದರು.
ಶೆರೇವಾಡ ಗ್ರಾಮದಲ್ಲಿ ಕುಸಿದು ಬಿದ್ದ ಹನುಮಂತಪ್ಪ ಮತ್ತಿಗಟ್ಟಿಯವರ ಮನೆ ವೀಕ್ಷಿಸಿ ಪಿಡಿಒಗೆ ಇದನ್ನು ಸರಿಪಡಿಸುವಂತೆ ಸೂಚಿಸಿದರು. ಗ್ರಾಮದ ಫಕೀರಪ್ಪ ಶೆರೇವಾಡ ಅವರ ಜಮೀನಿನಲ್ಲಿ ಬೆಳೆ ಹಾನಿ ವೀಕ್ಷಿಸಿದರು.
ಕೃಷಿ ಇಲಾಖೆ ಅಧಿಕಾರಿ ಭಾರತಿ ಮೆಣಸಿನಕಾಯಿ ಅವರಿಗೆ ಈ ಕುರಿತು ವರದಿ ಸಲ್ಲಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಎಂದು ಸೂಚಿಸಿದರು. ಕುಂದಗೋಳದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಅಬಕಾರಿ ಇಲಾಖೆ ಅಧಿಕಾರಿ ಪ್ರೇಮಸಿಂಗ್ ಲಮಾಣಿ ತಮ್ಮ ಇಲಾಖೆಯ ವರದಿ ಒಪ್ಪಿಸಿದರು. ಸಚಿವರು ಮಾತನಾಡಿ, ನಿಮ್ಮ ಇಲಾಖೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ದೂರುಗಳು ಬಂದಿವೆ. ಇನ್ನು ಮುಂದೆ ತಾಲೂಕಿನಲ್ಲಿ ಯಾವುದೇ ಅಕ್ರಮ ಮದ್ಯ ಮಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮದ್ಯ ಮಾರಾಟ ಮಾಡುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ 5000 ರೂ. ಬಹುಮಾನ ಘೊಷಿಸಿ ಎಂದು ಸೂಚಿಸಿದರು.
ಎಪಿಎಂಸಿಯ 23 ಎಕರೆ ಜಮೀನಿನಲ್ಲಿ 5 ಎಕರೆ ಬಸ್ ಡಿಪೋ ಹಾಗೂ 4 ಎಕರೆ ಕ್ರೀಡಾಂಗಣ ನಿರ್ವಿುಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಎಂದು ಎಪಿಎಂಸಿ ಅಧಿಕಾರಿಗೆ ಸಚಿವರು ಸೂಚನೆ ನೀಡಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ 1,000 ನಿವೇಶನ ನೀಡಲು ಪಟ್ಟಣ ಪಂಚಾಯಿತಿ ವತಿಯಿಂದ 5 ಎಕರೆ ಜಮೀನು ಮಂಜೂರು ಮಾಡಿ ಎಂದು ಪಪಂ ಅಧಿಕಾರಿ ಎನ್. ಡೊಂಬರ ಅವರಿಗೆ ತಿಳಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿ ವಿದ್ಯಾವತಿ ಪಾಟೀಲ ತಮ್ಮ ಇಲಾಖೆ ವರದಿ ಸಲ್ಲಿಸಿದರು. ನಂತರ ಸಚಿವರು ನಾನು ಯಾವ ಸಮಯದಲ್ಲಾದರೂ ಆಸ್ಪತ್ರೆಗೆ ಭೇಟಿ ನೀಡಬಹುದು. ಆಸ್ಪತೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿರುವ ಸಿಬ್ಬಂದಿ ಕೊರತೆ ಸರಿಪಡಿಸಿ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆಗೆ ಸಚಿವರು ಸೂಚಿಸಿದರು.
ಶಾಸಕ ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಸೀಲ್ದಾರ್ ಎಸ್.ಎಸ್. ಪರಮಾನಂದ, ತಾ ಪಂ. ಇಒ ಮಹೇಶ ಕುರಿ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.