ಗೆಸ್ಟ್​ ಹೌಸ್​ನಲ್ಲೇ ಕೆಎನ್ನಾರ್​ ಠಿಕಾಣಿ !!

KNR_Param
Published on

ತುಮಕೂರು: ತವರು ಜಿಲ್ಲೆಯಾದ್ದರಿಂದ ತುಮುಲ್​ ಅಧ್ಯಕ್ಷ ಸ್ಥಾನದ ಚುನಾವಣೆ ಸಹಕಾರ ಸಚಿವ ಕೆ.ಎನ್​.ರಾಜಣ್ಣಗೂ ಪ್ರತಿಷ್ಠೆಯಾಗಿತ್ತು. ಹಾಗಾಗಿ, ಚುನಾವಣೆ ನಡೆಯುವ ಸಂದರ್ಭದಲ್ಲಿ ತುಮುಲ್​ ಕಚೇರಿ ಸಮೀಪದ ಸಿದ್ಧಾರ್ಥ ಮೆಡಿಕಲ್​ ಕಾಲೇಜು ಅತಿಥಿ ಗೃಹದಲ್ಲಿ ಠಿಕಾಣಿ ಹೂಡಿ ಕಾಂಗ್ರೆಸ್​ ಬೆಂಬಲಿತ ಎಚ್​.ವಿ.ವೆಂಕಟೇಶ್​ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಬುಧವಾರ ಬೆಳಗ್ಗೆ ನಾಮಪತ್ರ ಸಲ್ಲಿಕೆ ಆರಂಭವಾದ ಕೂಡಲೇ ತುಮುಲ್​ ಕೆಲವು ನಿರ್ದೇಶಕರನ್ನು ಸ್ವಂತ ಕಾರಿನಲ್ಲಿ ಕೂರಿಸಿಕೊಂಡು ಆಗಮಿಸಿದ ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಜತೆಯಲ್ಲಿ ಕುಳಿತು ಚುನಾವಣೆಯಲ್ಲಿ ಯಾವುದೇ ಎಡವಟ್ಟುಗಳಾಗದಂತೆ ಎಚ್ಚರಿಕೆ ವಹಿಸಿದ್ದರು.

ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿದ ನಂತರ ನೂತನ ಅಧ್ಯಕ್ಷ ಎಚ್​.ವಿ.ವೆಂಕಟೇಶ್​ ನೇರವಾಗಿ ಸಚಿವರಿದ್ದ ಸ್ಥಳಕ್ಕೆ ಆಗಮಿಸಿ ಆಶಿರ್ವಾದ ಪಡೆದಿದ್ದು ವಿಶೇಷ ಎನ್ನಿಸಿತು. ಈ ಸಂದರ್ಭದಲ್ಲಿ ಸಚಿವರನ್ನು ಬಿಟ್ಟು ಜಿಲ್ಲೆಯ ಯಾವೊಬ್ಬ ಶಾಸಕನೂ ಇರಲಿಲ್ಲ. ಮಾಜಿ ಶಾಸಕ ವೆಂಕಟರಮಣಪ್ಪ ಹಾಜರಿದ್ದು ಮಗನಿಗೆ ಅಧಿಕಾರ ಸಿಕ್ಕಿದ್ದಕ್ಕೆ ಖುಷಿಯಲ್ಲಿದ್ದರು. ಪಾವಗಡದಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

===

===

==

ರಾಜ್ಯ ರಾಜಕ್ಕೀಯಕ್ಕಿದೆ "ತುಮುಲ್​" ನಂಟು:

ಪ್ರಸ್ತುತ ನಡೆದಿರುವ ತುಮುಲ್​ ಅಧ್ಯಕ್ಷ ಸ್ಥಾನದ ಚುನಾವಣೆ ಜತೆ ರಾಜ್ಯ ರಾಜಕೀಯ ನಂಟು ಇರುವುದು ಈಗ ಗುಟ್ಟಾಗಿ ಉಳಿದಿಲ್ಲ ಹಾಗೂ ಇಂತಹ ನಂಟು ಇದೇ ಮೊದಲೇನಲ್ಲ. ಹಿಂದೊಮ್ಮೆ ತುಮುಲ್​ ಅಧ್ಯಕ್ಷ ಸ್ಥಾನದ ಚುನಾವಣೆ ನಂತರ ಕಾಂಗ್ರೆಸ್ ​-ಜೆಡಿಎಸ್​ ಮೈತ್ರಿ ಸರ್ಕಾರದ ಸಿಎಂ ಆಗಿದ್ದ ಧರ್ಮಸಿಂಗ್​ ಸರ್ಕಾರ ಪತನವಾಗಲು ಮುನ್ನುಡಿಯಾಗಿದ್ದೂ ಇದೆ.

ಜಿಲ್ಲೆಯಲ್ಲಿ ಬರೋಬ್ಬರಿ ಎಂಟು ತಾಲೂಕುಗಳಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್​ಗೆ ಅಧ್ಯಕ್ಷ ಸ್ಥಾನ ತಪ್ಪಿಸಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದ್ದ ಜೆಡಿಎಸ್​ನ್ನ ಡಿ.ಕೃಷ್ಣಕುಮಾರ್​ ಅವರನ್ನು ಎಚ್​.ಡಿ.ರೇವಣ್ಣ ತುಮುಲ್​ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದು ಜಿಲ್ಲೆಯ ಕಾಂಗ್ರೆಸ್​ ಶಾಸಕರನ್ನು ಕೆರಳಿಸಿತ್ತು. ಸಮ್ಮಿಶ್ರ ಸರ್ಕಾರ ಕಲ್ಲು ಕಟ್ಟಡಕ್ಕಷ್ಟೇ ಸೀಮಿತ ಕಾರ್ಯಕರ್ತರ ಹೃದಯದಲ್ಲಿ ಅಲ್ಲ ಎಂದು ಜಿಲ್ಲೆಯ ಕಾಂಗ್ರೆಸ್​ ಶಾಸಕರು ಬಹಿರಂಗ ಹೇಳಿಕೆ ನೀಡಿ, ಅಂದಿನ ಎಐಸಿಸಿ ಅಧ್ಯೆ ಸೋನಿಯಾಗಾಂಧಿಗೆ ದೂರು ನೀಡಿದ್ದು ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾಂದಿಯಾಗಿತ್ತು.

ಆ ನಂತರ ಹಳೆ ಮೈಸೂರು ಭಾಗದಲ್ಲಿ ಇಂತಹದ್ದೇ ವಿಷಯದಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ನಡುವೆ ವೈಮನಸ್ಸು ಹೆಚ್ಚಾಗಿ ಮೈತ್ರಿಯೇ ಮುರಿದುಬಿದ್ದು ಜೆಡಿಎಸ್​, ಬಿಜೆಪಿ ಜತೆ ಹೋಗಿ ಸರ್ಕಾರ ರಚಿಸಿದ್ದು ಈಗ ಇತಿಹಾಸ. ತುಮುಲ್​ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ನಡೆದಿರುವ ಗುಂಪುಗಾರಿಕೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳ ಜತೆ ಬೆಸೆದುಕೊಂಡಿರುವುದನ್ನು ಅಲ್ಲಗಳೆಯಲಾಗದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net