ಅನಂತ ಕುಮಾರ ಹೆಗಡೆ ಮನುಷ್ಯನೋ, ಮೃಗನೋ ಗೊತ್ತಿಲ್ಲ:ಕೆಎನ್ನಾರ್

KNR12
Published on

ತುಮಕೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗಿಸಿದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಸಹಕಾರ ಸಚಿವ ಕೆ. ಎನ್.ರಾಜಣ್ಣ ಹರಿಹಾಯ್ದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜಣ್ಣ, ಸಿದ್ದರಾಮಯ್ಯರ ಬಗ್ಗೆ ಅವನ್ಯಾವನೋ ದುರಹಂಕಾರಿಯೊ, ಅಹಂಕಾರಿಯೊ, ಮನುಷ್ಯನೋ, ಮೃಗನೋ ಗೊತ್ತಿಲ್ಲ. ಮಗನೆ ಅಂತಾ ಕರೀತಾನಲ್ಲ ಅವನಿಗೆ ಎಷ್ಟು ಧೈರ್ಯ ಇರಬೇಕು ಎಂದು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯರನ್ನು ನಿಂದಿಸಿರುವುದನ್ನು ಈ ರಾಜ್ಯದಲ್ಲಿರುವ ಎಲ್ಲಾ ಸಾತ್ವಿಕರು ಕೂಡ ಖಂಡಿಸಬೇಕು. ಆರೇಳು ಬಾರಿ ಲೋಕಸಭಾ ಸದಸ್ಯನಾದವನು ಹೀಗೆ ಜನರ ಭಾವನೆಗಳನ್ನ ಕೆರಳಿಸುವುದು, ಜನರ ಮನಸ್ಸಿಗೆ ನೋವುಂಟಾಗುವಂತೆ ನಡೆದುಕೊಳ್ಳುವನು ಜನ ಪ್ರತಿನಿಧಿಯಾಗುವುದಕ್ಕೆ ನಾಲಾಯಕ್ ಅನ್ನುವುದು ನನ್ನ ಅಭಿಪ್ರಾಯ ಎಂದರು.

ಸಾಮಾನ್ಯವಾಗಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರ‌್ಯಾರು ಬೇರೆಯವರಿಗೆ ತೊಂದರೆ ಕೊಡುವುದಾಗಲಿ, ಹೀಯಾಳಿಸಿ ಮಾತನಾಡುವುದಿಲ್ಲ. ಇವನು ಬ್ರಾಹ್ಮಣ ಅಂತ ಹೇಳಿಕೊಳ್ಳುತ್ತಾನೆ. ಆದರೆ, ಸಮಾಜದ ಯಾವ ನಿಕೃಷ್ಟ ಮನುಷ್ಯನೂ ನಡೆದುಕೊಳ್ಳದಂತಹ ನಡವಳಿಕೆಗಳನ್ನ ತೋರಿಸುತ್ತಾನೆ. ನಾಲ್ಕೂವರೇ ವರ್ಷ ಎಲ್ಲೋ ಮಲಗಿರುತ್ತಾನೆ. ಅದೆಲ್ಲಿ ಇರುತ್ತಾನೋ ಗೊತ್ತಿಲ್ಲ. ಚುನಾವಣೆಗೆ ಇನ್ನೇನು 6 ತಿಂಗಳಿರುವಾಗ ಎದ್ದು ಬಂದು ಈ ರೀತಿ ನಾಲಿಗೆ ಹರಿಯಬಿಡುತ್ತಾನೆ ಎಂದು ಹರಿಹಾಯ್ದರು.

ಹಿಂದುತ್ವ ಅಂತ ಬಾಯಿ ಬಡಿದುಕೊಳ್ಳುತ್ತಾರೆ. ಈ ಹಿಂದುತ್ವದ ಬಗ್ಗೆ ನನ್ನದೊಂದು ವ್ಯಾಖ್ಯಾನ ಇದೆ. ಸಿದ್ದರಾಮಯ್ಯ, ಕಾಂಗ್ರೆಸ್ಸಿಗರು ಹಿಂದು ವಿರೋಧಿಗಳು ಅಂತ ಹರಿಹಾಯುತ್ತಾರೆ. ಇಲ್ಲಿರುವ ನಾವೆಲ್ಲರೂ ಹಿಂದುಗಳೇ. ನಾವು ಗಾಂಧೀಜಿ ಪ್ರತಿಪಾದಿಸಿದ ಹಿಂದುವಾದಿಗಳು. ಅವರು ಗಾಂಧಿಯನ್ನ ಕೊಂದ ಗೋಡ್ಸೆ ಪ್ರತಿಪಾದಿಸಿದ ಹಿಂದುಗಳು. ದೇಶವನ್ನ ದಾಸ್ಯದ ಸಂಕೋಲೆಯಿಂದ ಬಿಡಿಸಬೇಕು ಎಂದು ಹೋರಾಡಿದ ಮಹಾನ್ ಪುರುಷ ಗಾಂಧಿ. ಅಂತವರನ್ನು ಕೊಂದವರ ಅನುಯಾಯಿಗಳನ್ನ ನಾವು ಏನೆಂದು ಕರೆಯಬೇಕು ನೀವೇ ಹೇಳಿ ಎಂದು ವಾಗ್ಧಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net