

ತುಮಕೂರು:ನಮ್ಮೂರಲ್ಲಿ ನೂರಾರು ವರ್ಷ ಇತಿಹಾಸ ಇರುವಂತಹ, ಪಾವಿತ್ರ್ಯವಿರುವ ಶ್ರೀರಾಮನ ದೇವಸ್ಥಾನಗಳಿವೆ. ಈಗ ಅದನ್ನ ಬಿಟ್ಟು ಇವರು ಚುನಾವಣೆಗಾಗಿ ದೇವಸ್ಥಾನಗಳನ್ನ ಕಟ್ಟಿ, ಜನರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಮಂಗಳವಾರ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಬಾಬ್ರಿ ಮಸೀದಿ ಕೆಡವಿದ್ದಾಗ ಅಲ್ಲಿಗೆ ಹೋಗಿದ್ದೆ ಒಂದು ಟೆಂಟ್‌ನಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮನ ಗುಡಿ ಅಂತ ಹೇಳುತ್ತಿದ್ದರು. ನಾವು ನಮ್ಮೂರಿನ ದೇವಸ್ಥಾನಕ್ಕೆ ಹೋದರೆ ಮೈ-ಮನ ತುಂಬಿ ಭಕ್ತಿ ಹರಿದುಬರುತ್ತೆ. ಅವತ್ತು ನನಗೇನು ಅನಿಸಲೇ ಇಲ್ಲ. ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸಿತು ಎಂದು ಸಚಿವ ಕೆ.ಎನ್.ರಾಜಣ್ಣ ಅಯೋಧ್ಯ ರಾಮಮಂದಿರ ಕುರಿತು ಪರೋಕ್ಷವಾಗಿ ಟೀಕಾ ಪ್ರಹಾರ ನಡೆಸಿದರು.
ಒಂದೊತ್ತಿನ ಊಟ ಮಾಡುವ ಬಡಬ್ರಾಹ್ಮಣರಿದ್ದಾರೆ...! ನನ್ನದು ಬಡವರ ಜಾತಿ. ಎಲ್ಲಾ ವರ್ಗದ ಬಡವರ ಪ್ರತಿನಿಧಿ ನಾನು. ಇಂದಿಗೂ ಚಿಕ್ಕಪೇಟೆಯಲ್ಲಿ ಒಂದೊತ್ತಿನ ಊಟ ಮಾಡುವ ಬಡ ಬ್ರಾಹ್ಮಣರಿದ್ದಾರೆ. ಚುನಾವಣೆಗೋಸ್ಕರ ಶ್ರೀರಾಮನ ಜಪ ಮಾಡುತ್ತಿರುವ ಪಕ್ಷದ ಕಣ್ಣಿಗೆ ಇದು ಕಾಣುವುದಿಲ್ಲವೇ ? ಇಷ್ಟೊಂದು ಅಬ್ಬರದಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರ ಕಾರ್ಯಕ್ರಮವು ಬಿಜೆಪಿಯದ್ದೋ, ಮೋದಿ ಅವರದ್ದೋ ಎಂಬುದು ಐದಾರು ತಿಂಗಳಲ್ಲಿ ಗೊತ್ತಾಗಲಿದೆ. ಜನರ ಭಾವನೆಗಳೊಂದಿಗೆ ಆಟ ಆಡುವುದನ್ನು ನಿಲ್ಲಿಸುವುದು ಒಳ್ಳೆಯದು ಎಂದು ಸಚಿವ ಕೆ.ಎನ್.ರಾಜಣ್ಣ ಟಾಂಗ್ ಕೊಟ್ಟರು.