ಬಜೆಟ್​ ಗ್ರಾತ್ರ 4 ಲಕ್ಷ ಕೋಟಿ, ಜಿಲ್ಲೆಗೆ ಹೆಚ್ಚಿನ ಕೊಡುಗೆ ನಿರೀಕ್ಷೆ

Param_Budget
Published on

ತುಮಕೂರು: ಪ್ರಸ್ತುತ 4 ಲಕ್ಷ ಕೋಟಿ ರೂ. ರಾಜ್ಯ ಬಜೆಟ್​ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಹಾಗೂ ವಿಶೇಷ ಕಾರ್ಯಕ್ರಮ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದು, ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈಲ್ವೆ ಹಾಗೂ ಎತ್ತಿನಹೊಳೆ ಯೋಜನೆ ಭೂಸ್ವಾಧಿನ ಪ್ರಕ್ರಿಯೆ ಸಂಬಂಧಿಸಿದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯಕ್ಕೆ ಮೀಸಲಿರುವ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಪರಿಶಿಷ್ಟರಿಗೆ ಎಷ್ಟು ಕೊಟ್ಟಿದೆ ಎಂಬುದನ್ನು ಬಿಜೆಪಿ ಮುಖಂಡರು ತಿರುಗಿ ನೋಡಿಕೊಳ್ಳಲಿ ಸಾಕು. 50 ಲಕ್ಷ ಕೋಟಿ ರೂ. ಬಜೆಟ್​ನಲ್ಲಿ ಶೇ.24 ಕೊಡಬೇಕಲ್ಲವೇ? ಉತ್ತರ ಭಾರತದ ಭಾಗದಲ್ಲಿ ಪರಿಶಿಷ್ಟ ಪಂಗಡದವರ ಸಂಖ್ಯೆ ಹೆಚ್ಚಿದೆ. ಉತ್ತರ ಪ್ರದೇಶ, ಪಂಜಾಬ್​ನಲ್ಲಿ ಶೇ.35 ಎಸ್​ಸಿ ಜನರಿದ್ದರೂ ಅನುದಾನ ನೀಡಿಲ್ಲ ಎಂದರು.

ಇಂತಿಷ್ಟು ಪ್ರಮಾಣ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಬೇಕು ಎಂದು ನಮ್ಮ ಸಂವಿಧಾನದಲ್ಲಿದೆ. ಅದು ನೀಡಬೇಕಲ್ಲವೆ. ಹಣ ಖರ್ಚು ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಕಾನೂನು ತಂದಿದ್ದೇವೆ. ಅದನ್ನು ಕೇಂದ್ರ ಸರ್ಕಾರ ಮಾಡಬೇಕು. ಇದಕ್ಕೆ ಬಿಜೆಪಿಯವರು ಉತ್ತರಿಸಬೇಕು ಎಂದು ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net