

ತುಮಕೂರು: ಸ್ಮಾರ್ಟ್‌ಸಿಟಿ ತುಮಕೂರು ನಗರದಲ್ಲಿ ಅಂದಾಜು 4ಲಕ್ಷ ಜನಸಂಖ್ಯೆ ಇದ್ದು, ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಿ ನೀರು ಪೂರೈಸಬೇಕು. ಈಗ 5 ದಿನಕ್ಕೊಮ್ಮೆ ನೀರು ಪೂರೈಸುವ ಮಾಹಿತಿ ನೀಡಲಾಗಿದೆ. ಹೀಗಾದಲ್ಲಿ ಜನ ಹೇಗೆ ಬದುಕಬೇಕು. ವಾಸ್ತವ ಪರಿಸ್ಥಿತಿ ಅರಿತಿದ್ದೀರಾ.? ಬೇಸಿಗೆಯಲ್ಲಿ ಜನರಿಗೆ ವ್ಯವಸ್ಥಿತವಾಗಿ ನೀರು ಪೂರೈಕೆ ಮಾಡುವ ಸಂಬಂಧ ಈ ಹಿಂದೆಯೇ ಏಕೆ ಯೋಜನೆ ರೂಪಿಸಿಲ್ಲ ? ಹೀಗೆಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈದಾಳ, ಹೆಬ್ಬಾಕ, ಅಮಾನಿಕೆರೆ, ಗಂಗಸಂದ್ರ, ಮರಳೂರು ಕೆರೆಗಳಿಂದ ಶುದ್ಧ ಕುಡಿಯುವ ನೀರು ಪೂರೈಸುವ ಸಂಬಂಧ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲು ಸೂಚನೆ ನೀಡಿದರು.
25ರೊಳಗೆ ಹೇಮೆ ಹರಿಸಲು ಕ್ರಮವಹಿಸಿ: ಹೇಮಾವತಿ ಮುಖ್ಯ ಶಾಖಾನಾಲೆ 96, 97, 98 ಕಿ.ಮೀ., ವ್ಯಾಪ್ತಿಯಲ್ಲಿ ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ನಾಲೆ ಕುಸಿದಿದ್ದು ದುರಸ್ತಿ ಕಾರ್ಯ ನಡೆಯುತ್ತಿದೆ. ಜೂ.23ರೊಳಗಾಗಿ ಪೂರ್ಣಗೊಳಿಸಿ 25 ರೊಳಗಾಗಿ ಹೇಮಾವತಿ ನೀರನ್ನು ಜಿಲ್ಲೆಗೆ ಹರಿಸಲು ಕ್ರಮವಹಿಸುವಂತೆ ಹೇಮಾವತಿ ನಾಲಾ ವಲಯ ಅಧಿಕಾರಿಗಳಿಗೆ ಪರಮೇಶ್ವರ ಖಡಕ್ ಆದೇಶಿಸಿದರು.
ಸಭೆಯಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಡಾ. ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.