ಕಾರು ಬಿಟ್ಟು ಕಾಲ್ನಡಿಗೆಯಲ್ಲಿ ಹೇಮೆ ನಾಲೆ ವೀಕ್ಷಿಸಿದ ಪರಂ

Param_Heme
Published on

ತುಮಕೂರು: ನಗರದ ಹೊರವಲಯದಲ್ಲಿರುವ ನರಸಾಪುರ ಗೇಟ್​ನಿಂದ ಬುಗುಡನಹಳ್ಳಿ ಜಲಸಂಗ್ರಹಾಗಾರದವರೆಗೂ ಕಾಲ್ನಡಿಗೆಯಲ್ಲಿ ಸಾಗಿ ಹೇಮಾವತಿ ನಾಲೆ ನೀರು ಹರಿಯುವಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ವೀಕ್ಷಿಸಿದರು.

ಬುಗುಡನಹಳ್ಳಿ ಕೆರೆಯಲ್ಲಿ ಬೆಳೆದಿರುವ ಜಾಲಿಗಿಡ, ಜಂಗಲ್​, ಗಿಡ-ಗಂಟೆಗಳನ್ನು ಕೂಡಲೇ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಕೆರೆಗೆ ಯಾವುದೇ ಕಲುಷಿತ ನೀರು ಸೇರದಂತೆ ಎಚ್ಚರಿಕೆವಹಿಸುವಂತೆ ಸ್ಥಳದಲ್ಲೇ ಇದ್ದ ಪಾಲಿಕೆ ಆಯುಕ್ತೆ ಅಶ್ವಿಜಗೆ ನಿರ್ದೇಶನ ನೀಡಿದರು.

ನರಸಾಪುರ ಗೇಟ್​ನಿಂದ ಜಲಸಂಗ್ರಹಾಗಾರಕ್ಕೆ ಸೇರುವ ರಸ್ತೆಯನ್ನು ಅಗಲೀಕರಣಗೊಳಿಸಬೇಕು. ಕೆರೆ ಏರಿ ಮೇಲೆ ತಿರುಗಾಡಲು ಅನುಕೂಲ ಮಾಡಿಕೊಡಬೇಕು ಎಂದು ಸ್ಥಳಿಯ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಾತನಾಡಿ, ಗೊರೂರು ಜಲಾಶಯದಿಂದ ಮೇ 23 ರಿಂದ ಜಿಲ್ಲೆಗೆ ಹೇಮಾವತಿ ನಾಲೆಗೆ ನೀರು ಹರಿಸಲಾಗಿದ್ದು, ಮೇ 25 ರಾತ್ರಿ 11.15ಕ್ಕೆ ತುಮಕೂರಿಗೆ ನೀರು ತಲುಪಿದೆ. ಸಂಗ್ರಹವಾದ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುವುದು ಎಂದು ತಿಳಿಸಿದರು.

ಪಾವಗಡ ಶಾಸಕ ಎಚ್​.ವಿ.ವೆಂಕಟೇಶ್​, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ. ಅಶೋಕ್​, ಹೇಮಾವತಿ ನಾಲಾ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್​ ಸಿ.ಸಂಪತ್​ ಕುಮಾರ್​, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎ.ಸಿ.ಶಿವಶಂಕರ್​, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಗಿರೀಶ್​ ಬಾಬುರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net