ತೆರಿಗೆ ಸೋರಿಕೆ ತಡೆಗೆ ಸ್ಥಳೀಯಾಡಳಿತದಲ್ಲಿ ಇ-ಪಾವತಿ ಸನ್ನಿಹಿತ: ವಿಜಯವಾಣಿ ಸಂವಾದದಲ್ಲಿ ಸಚಿವ ಎಂ.ಟಿ.ಬಿ. ನಾಗರಾಜ್

MTB
Published on

ಬೆಂಗಳೂರು: ತೆರಿಗೆ ಸಂಗ್ರಹದಲ್ಲಿ ಸೋರಿಕೆ ತಡೆಯುವುದು ಮತ್ತು ಪಾರದರ್ಶಕತೆ ತರುವ ಉದ್ದೇಶದಿಂದ ಪೌರಾಡಳಿತ ಇಲಾಖೆಯು ಆನ್​ಲೈನ್ ಮೂಲಕ ‘ಪಾವತಿ ವ್ಯವಸ್ಥೆ’ ವೇದಿಕೆ ಸಜ್ಜುಗೊಳಿಸುತ್ತಿದೆ. ‘ವಿಜಯವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಈ ವಿಷಯ ಪ್ರಕಟಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನದಂತೆ ಆಡಳಿತದಲ್ಲಿ ಮಹತ್ವದ ಸುಧಾರಣೆ ತರುವ ಭಾಗವಾಗಿ ಆನ್​ಲೈನ್ ಪೇಮೆಂಟ್ ಗೇಟ್​ವೇ ವ್ಯವಸ್ಥೆ ಅಳವಡಿಸಿಕೊಳ್ಳುವ ಕಾರ್ಯ ನಡೆದಿದೆ ಎಂದು ವಿವರಿಸಿದರು.

ಪ್ರಾಯೋಗಿಕವಾಗಿ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಆನ್​ಲೈನ್ ಪಾವತಿ ವಿಧಾನ ಅಳವಡಿಸಿದ್ದು, ಯಶಸ್ವಿಯಾಗಿರುವ ಕಾರಣ ರಾಜ್ಯವ್ಯಾಪಿ ವಿಸ್ತರಿಸಲಾಗುತ್ತಿದೆ. ಸಿಎಂ ಬೊಮ್ಮಾಯಿ ಶೀಘ್ರವೇ ಚಾಲನೆ ನೀಡಲಿದ್ದಾರೆ. ಈ ವಿಧಾನ ಜಾರಿಯಾದರೆ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಸಕಾಲಕ್ಕೆ ತೆರಿಗೆ ಪಾವತಿಯಾಗುವುದು ಜತೆಗೆ ಪಾರದರ್ಶಕತೆ ಹೆಚ್ಚುತ್ತದೆ ಎಂದರು.

ತೆರಿಗೆ ಸಂಗ್ರಹಣ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಮಾರ್ಗಸೂಚಿ ದರವನ್ನು ವಸತಿ, ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಕಳೆದ ವರ್ಷದಿಂದಲೇ ಈ ಕ್ರಮ ಅನುಸರಿಸಲಾಗುತ್ತಿದ್ದು, ಹೊಸದಾಗಿ ತೆರಿಗೆ ಹೆಚ್ಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಾರ್ಗಸೂಚಿ ದರ ಪರಿಷ್ಕರಣೆಯಾದಂತೆ ತೆರಿಗೆ ನಿಗದಿಯಾಗಲಿದ್ದು, ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಲು ನೆರವಾಗುತ್ತದೆ ಎಂದು ಹೇಳಿದರು.

ಸಿಎಂ ಮಾರ್ಗದರ್ಶನದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಇ- ಸ್ವೀಕೃತಿ ಉಪಕ್ರಮಕ್ಕೆ ಮುಂದಾಗಿದ್ದು, ಶೀಘ್ರವೇ ನಾಗರಿಕರು ಬೆರಳ ತುದಿಯಲ್ಲಿ ತೆರಿಗೆ ಪಾವತಿಸುವ ಅನುಕೂಲ ಪಡೆಯಲಿದ್ದಾರೆ. | ಎಂ.ಟಿ.ಬಿ.ನಾಗರಾಜ್ ಪೌರಾಡಳಿತ ಸಚಿವ

ಪೌರ ಕಾರ್ವಿುಕರಿಗೆ ಗುಡ್​ನ್ಯೂಸ್

ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಹೊರ ಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ವಿುಕರಿಗೆ ಸರ್ಕಾರ ಇಷ್ಟರಲ್ಲೇ ಶುಭ ಸುದ್ದಿ ನೀಡಲಿದೆ. ಕಸ ಸಂಗ್ರಹ ಮಾಡುವವರು, ಲೋಡರ್​ಗಳು, ಚಾಲಕರ ದೀರ್ಘಾವಧಿಯ ಬೇಡಿಕೆಯಾಗಿರುವ ನೇರ ಪಾವತಿ ವ್ಯವಸ್ಥೆಗೆ ಕೊನೆ ಹಂತದ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಬಹಿರಂಗಪಡಿಸಿದರು. ಈವರೆಗೂ ಸರ್ಕಾರದಿಂದ ಹೊರ ಗುತ್ತಿಗೆದಾರರಿಗೆ ನೀಡುತ್ತಿದ್ದ ಮೊತ್ತದಲ್ಲೇ ಒಂದಷ್ಟು ಕಡಿತಗೊಳಿಸಿ ಪೌರಕಾರ್ವಿುಕರಿಗೆ ಪಾವತಿಸಲಾಗುತ್ತಿದೆ. ಈ ವ್ಯವಸ್ಥೆ ಬದಲು ಸರ್ಕಾರವೇ ನೇರವಾಗಿ ವೇತನ ಪಾವತಿ ಮಾಡಬೇಕೆಂಬುದು ಕಾರ್ವಿುಕರ ಬೇಡಿಕೆ. ಇದಕ್ಕಾಗಿ ಅಧಿಕಾರಿಗಳ ಹಂತದಲ್ಲಿ ರ್ಚಚಿಸಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಸಿಎಂ ಜತೆ ರ್ಚಚಿಸಿ ಅನುಮತಿ ಪಡೆದ ನಂತರ ಕಾನೂನು ಮತ್ತು ಆರ್ಥಿಕ ಇಲಾಖೆಯ ಸಹಮತಿ ಪಡೆದು ಸಂಪುಟ ಸಭೆಯ ಮುಂದಿಡಲಾಗುತ್ತಿದೆ ಎಂದು ಹೇಳಿದರು. ನೇರ ಪಾವತಿ ಜತೆಗೆ ಕಾರ್ವಿುಕರು ವಯೋ ನಿವೃತ್ತಿಯಾದ ನಂತರ ಕನಿಷ್ಠ 5 ಲಕ್ಷ ರೂ.ವರೆಗೆ ಇಡುಗಂಟು ಪಡೆಯುವಂತಾಗಬೇಕು ಮತ್ತು ಸರ್ಕಾರಿ ನೌಕರರು ಪಡೆಯುತ್ತಿರುವ ಆರೋಗ್ಯ ಸೇವೆ ಸೌಲಭ್ಯವನ್ನು ಇವರಿಗೂ ವಿಸ್ತರಿಸುವ ಚರ್ಚೆಯಾಗಿದೆ. ಶೀಘ್ರವೇ ಸಿಎಂ ಜತೆ ಚರ್ಚೆ ಮಾಡಲಾಗುತ್ತದೆ ಎಂದರು.

ಮುಖ್ಯಾಂಶ

  • ಪಾಲಿಕೆಗಳು ಸೇರಿ 319 ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಇ- ಸ್ವೀಕೃತಿ ಯೋಜನೆ
  • ಕಲಬುರಗಿ ಪಾಲಿಕೆ, ರಾಮನಗರ ನಗರಸಭೆಯಲ್ಲಿ ಪ್ರ್ರಾಯೋಗಿಕ ಅನುಷ್ಠಾನ
  • ಶೇ.70-75ರಷ್ಟು ತೆರಿಗೆ ಸಂಗ್ರಹವಾಗುತ್ತಿದ್ದು, ಇ-ಸ್ವೀಕೃತಿ ಮೂಲಕ ಶೇ.90ಕ್ಕಿಂತ ಹೆಚ್ಚು ಸಂಗ್ರಹ ಗುರಿ
  • ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ತೆರಿಗೆ ಪಾವತಿಸುವ ಅವಕಾಶ
  • ಆಸ್ತಿ ಮಾಲಿಕರು ಪರ ಊರಲ್ಲಿದ್ದರೂ ಆನ್​ಲೈನ್ ವ್ಯವಸ್ಥೆಯಿಂದ ಕರ ಪಾವತಿಸುವ ಅವಕಾಶ
  • ಮೊಬೈಲ್ ಆ್ಯಪ್​ ಕೂಡ ಅಭಿವೃದ್ಧಿ, ಬಿಲ್ ಕಲೆಕ್ಟರ್​ಗೆ ಪಿಒಎಸ್, ಖಜಾನೆಗೆ ನೇರ ಸಂಪರ್ಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net