

ತುಮಕೂರು: ನಾನು ಯಾವುದೇ ಖಾತೆ ಬೇಕು ಅಂತ ಕೇಳಿಲ್ಲ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ನೂತನ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸಿದ್ದಗಂಗಾ ಮಠಕ್ಕೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಇದೊಂದು ಅತ್ಯಂತ ಪೂಜ್ಯನಿಯ ಶ್ರೇಷ್ಠ ಪವಿತ್ರ ಕ್ಷೇತ್ರ. ಶಿವಕುಮಾರ ಶ್ರೀಗಳ ಗದ್ದುಗೆಯಲ್ಲಿ ಆಶೀರ್ವಾದ ಪಡೆದು ರಾಜ್ಯದ ಜನರ ಸೇವೆ ಮಾಡಲಿಕ್ಕೆ ಶಕ್ತಿಯನ್ನ ಕೊಡುವಂತೆ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಡಿಸಿಎಂ ಹುದ್ದೆ ಆಕಾಂಕ್ಷೆ : ರಾಜಕಾರಣದಲ್ಲಿ ಕೆಲವೊಂದು ಅನಿವಾರ್ಯತೆಗಳು ಇರುತ್ತಾವೆ. ಹೀಗಾಗಿ ಪಕ್ಷ ನಿರ್ಧಾರ ಮಾಡಿದಾಗೇ ಆ ನಿರ್ಧಾರಕ್ಕೆ ನಾವು ಒಪ್ಪಿಗೆ ಸೂಚಿಸಬೇಕಾಗುತ್ತೆ. ಇದೇ ಅಂತ್ಯ ಅಂತಲ್ಲ, ಕೆಲವರಿಗೆ ಮನವರಿಕೆ ಮಾಡುತ್ತಾರೆ ಎಂದು ಡಿಸಿಎಂ ಹುದ್ದೆ ಬಗ್ಗೆ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.
ಬೊಮ್ಮಾಯಿಗೆ ಟಾಂಗ್
40% ಕಮೀಷನ್ ಆರೋಪ ಮಾಡಿದ್ದು ಕಾಂಗ್ರೆಸ್ ಪಕ್ಷ ಅಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು. ಎಲ್ಲಾ ಕಡೆ ಐಟಿ, ಇಡಿ ರೈಡ್ ,ಸಿಬಿಐ ತನಿಖೆ ಮಾಡಿಸುವ ಪ್ರಧಾನಿ ಮಂತ್ರಿ ಮೋದಿ ಅವರು ಕಳೆದ ಎರಡು ವರ್ಷದಿಂದ ಈ ಕಮೀಷನ್ ಪ್ರಕರಣದಲ್ಲಿ ಬಾಯಿಬಿಟ್ಟಿಲ್ಲ. ಇದರಲ್ಲಿ ಭಾಗಿಯಾದವರ ಬಗ್ಗೆ ತನಿಖೆ ಮಾಡಿಸಿದ್ದಾರಾ ಇಲ್ಲ. ಬೊಮ್ಮಾಯಿ ಅವರು ಸಾಕ್ಷಿ ಸಾಕ್ಷಿ ಕೊಡಿ ಅಂತಾರೆ. ಅವರದೇ ಪಕ್ಷದ ನಿಗಮದ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಕಂತೆ ಕಂತೆ 9, 10 ಕೋಟಿ ಹಣ ಸಿಗುತ್ತೆ. ಇದಕ್ಕಿಂತ ದೊಡ್ಡ ಸತ್ಯ ಬೇಕಾ ನಿಮಗೆ..? ಪಿಎಸ್‌ಐ ನೇಮಕಾತಿಯಲ್ಲಿ ಪೊಲೀಸ್ ಎಡಿಜಿಪಿ ಅಮೃತಪೌಲ್ ಬಂಧಿಸಲಾಯಿತು. ಏನು ಇಲ್ದೆ ಅವರನ್ನ ಬೊಮ್ಮಾಯಿ ಅವರು ಜೈಲಿಗೆ ಹಾಕಿದ್ರಾ. ಸಾಕ್ಷಿ ಕೇಳುವ ಬೊಮ್ಮಾಯಿ ಅವರಿಗೆ ಈ ಹಗರಣಗಳ ತನಿಖೆ ಮಾಡ್ತೀವಿ ಆಗ ಗೊತ್ತಾಗುತ್ತೆ ಎಂದು ಸಚಿವ ಎಂ.ಬಿ.ಪಾಟೀಲ್ ಟಾಂಗ್ ಕೊಟ್ಟರು.