

ಚಾಮರಾಜನಗರ: ಬೈಕ್ ಹಾಗೂ ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಚಾಲಾನ ಸಮಾರಂಭದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸಚಿವರು ಮಂಡ್ಯಕ್ಕೆ ತೆರಳುತ್ತಿದ್ದರು. ನಗರದ ಹೊರವಲಯದ ಸಂತೇಮರಳ್ಳಿ ಮುಖ್ಯ ರಸ್ತೆಯ ದೊಡ್ಡಪೇಟೆ ಕ್ರಾಸ್ ಬಳಿ ಬೈಕ್ನಲ್ಲಿ ಚಲಿಸುತ್ತಿದ್ದ ಇಬ್ಬರು ಯುವಕರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ರಕ್ತ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರು.
ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಸಚಿವರು, ತಮ್ಮ ಕಾರನ್ನು ನಿಲ್ಲಿಸಿ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಕೆಲಸದ ಒತ್ತಡದ ಮಧ್ಯೆಯೂ ಸಚಿವರು ಗಾಯಾಳುಗಳನ್ನು ಸಾಗಿಸಲು ಎಲ್ಲ ವ್ಯವಸ್ಥೆ ಮಾಡಿದರು.
ಈ ವೇಳೆ ಸ್ಥಳೀಯರು ದೊಡ್ಡಪೇಟೆ ಕ್ರಾಸ್ನಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದು, ಇದಕ್ಕೆ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು. ಗಾಯಾಳುಗಳಿಗೆ ನೆರವಾದ ಸಚಿವರ ಮಾನವೀಯತೆ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು.