

ಕಲ್ಕತ್ತಾ: ಲೋಕಸಭೆ ಚುನಾವಣೆಗೂ ಮುನ್ನವೇ ತಮ್ಮ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ತಮಗೆ ಈ ಕುರಿತು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಕೇಂದ್ರ ಬಿಜೆಪಿ ಸರ್ಕಾರ ಈ ರೀತಿ ದ್ವೇಷ ರಾಜಕಾರಣ ಮಾಡುವುದು ಒಳ್ಳೆಯ ಕ್ರಮವಲ್ಲ ಎಂದು ಕಿಡಿಕಾರಿದ್ದಾರೆ.
ಕಳೆದ ವಾರ ಜಾರಿ ನಿರ್ದೇಶನಾಲಯ ಅಭಿಷೇಕ್ ಬ್ಯಾನರ್ಜಿ ಒಡೆತನ ಹಾಗೂ ಪಾಲುದಾರಿಕೆ ಹೊಂದಿರುವ ಕಂಪನಿಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿತ್ತು.
ಕೇಂದ್ರ ಬಿಜೆಪಿ ಸರ್ಕಾರವು ಇತ್ತೀಚಿಗೆ ಮುಕ್ತಾಯಗೊಂಡ ಲೋಕಸಭೆ ಅಧಿವೇಶನದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಚುನಾವಣಾ ಆಯೋಗಕ್ಕೆ ಆಯುಕ್ತರ ನೇಮಕಾತಿಯನ್ನು ನಿಯಂತ್ರಿಸುವ ಮಸೂದೆಯಮನ್ನು ಅಂಗೀಕರಿಸಿದೆ. ಅವರು ಈ ರೀತಿ ಮಾಡಿರುವುದರಿಂದ ದೇಶದಲ್ಲಿ ಯಾವ ಕ್ಷಣ ಬೇಕಾದರೂ ಚುನಾವಣೆ ನಡೆಯಬಹುದು. ಬರುವ ಡಿಸೆಂಬರ್ನಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಶಂಕಿಸಿದ್ದಾರೆ.
ಇಡಿಯಲ್ಲಿ ನನಗೆ ಪರಿಚಯವಿರುವ ಹಿರಿಯ ಅಧಿಕಾರಿಯೊಬ್ಬರು ಚುನಾವಣೆಗೂ ಮುನ್ನವೇ ಅಭಿಷೇಕ್ ಬ್ಯಾನರ್ಜಿ ಅವರನ್ನು ಬಂಧಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಅವರು ನಕಲಿ ದಾಖಲೆಗಳನ್ನು ಕಂಪ್ಯೂಟರ್ ಮೂಲಕ ಡೌನ್ಲೋಡ್ ಮಾಡಿ ಅದನ್ನು ಅಸಲಿ ಎಂದು ನಂಬಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ನೀವು ನಿಮ್ಮ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಈ ರೀತಿ ಮಾಡುವ ಬದಲು ದೇಶದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ನೀವು ಅಂತಹವರ ವಿರುದ್ಧ ಕ್ರಮ ಜರುಗಿಸುವ ಬದಲು ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸುವವರ ವಿರುದ್ಧ ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಅನಾರೋಗ್ಯದ ನಿಮಿತ್ತ ನಾನು ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಿದ್ದೆ, ಆಗ ಬಿಜೆಪಿಯವರು ನಾನು ಭಾರತಕ್ಕೆ ಮರಳುವುದಿಲ್ಲ ಎಂದು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದರು. ನೀವು ಒಂದು ತಿಳಿಯಬೇಕಿರುವುದು ಏನೆಂದರೆ ನನ್ನ ಉಪನಾಮ ಬ್ಯಾನರ್ಜಿ ಮೋದಿ, ಮಲ್ಯ, ಚೋಕ್ಸಿಯಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ.