

ಚಿಂತಾಮಣಿ: ನಗರಸಭೆ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಡಾ.ಎಂ.ಸಿ. ಸುಧಾಕರ್ ಶನಿವಾರ ಚಾಲನೆ ನೀಡಲಿದ್ದಾರೆ ಎಂದು ಪೌರಾಯುಕ್ತ ಜಿ.ಎನ್. ಚಲಪತಿ ತಿಳಿಸಿದರು.
ಕಾರ್ಯಕ್ರಮ ನಡೆಯುವ ನಗರದ ಸೊಣ್ಣಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಜಾಗದಲ್ಲಿ ಶುಕ್ರವಾರ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದರು.
ಅಮೃತ್ ನಗರೋತ್ಥಾನನ 4ನೇ ಹಂತದಲ್ಲಿ 2180.21 ಲಕ್ಷ ರೂ., 15ನೇ ಹಣಕಾಸು ಯೋಜನೆಯಡಿ 685.40 ಲಕ್ಷ ರೂ., ಎಸ್‌ಬಿಎಂ ಯೋಜನೆಯಡಿಯಲ್ಲಿ 90.25 ಲಕ್ಷ ರೂ., ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ 55.01 ಲಕ್ಷ ರೂ. ಮತ್ತು ಟೈಡ್ ಸಂಸ್ಥೆ ವತಿಯಿಂದ 30 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಲಿದ್ದಾರೆ ಎಂದರು.
2705.51 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸುವ ಸಚಿವರು, ವಿವಿಧ ಯೋಜನೆಗಳಡಿ ಪೂರ್ಣಗೊಂಡಿರುವ 270.35 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. 61 ಮಂದಿ ವಿವಿಧ ಯೋಜನೆಗಳ ಲಾನುಭವಿಗಳಿಗೆ 41.01 ಲಕ್ಷ ರೂ. ಮೌಲ್ಯದ ಸವಲತ್ತು ವಿತರಿಸಲಿದ್ದಾರೆ. ಟೈಡ್ ಮತ್ತು ಬೋರ್ಡಾ ಸಂಸ್ಥೆ ಪೂರೈಸಿರುವ 30 ಲಕ್ಷ ರೂ. ಯಂತ್ರೋಪಕರಣ ಸೇರಿ ಒಟ್ಟು 3046.87 ಲಕ್ಷ ರೂ. ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.
ರಸ್ತೆ ಅಭಿವೃದ್ಧಿಗೆ 28 ಕೋಟಿ ರೂ., ಒಳಚರಂಡಿಗೆ 2 ಕೋಟಿ ರೂ., ವಾರ್ಡ್‌ವಾರು ಕಸ ಸಂಗ್ರಹಣೆಗೆ 17 ಟಿಪ್ಪರ್‌ಗಳಿಗೆ ಚಾಲನೆ, ರಸ್ತೆ ಸ್ವಚ್ಛತಾ ವಾಹನ (ಸ್ಟೀಪಿಂಗ್ ವೆಹಿಕಲ್) ಲೋಕಾರ್ಪಣೆ, ಅಂಗವಿಕಲರಿಗೆ ತ್ರಿಚಕ್ರ ವಾಹನ, ಡಿಸ್ಪೋಸಬಲ್ ವಾಟರ್ ಬಾಟಲ್ ಸಂಗ್ರಹಣೆಗೆ ನಾಲ್ಕು ಬೃಹತ್ ಗಾತ್ರದ ಸ್ಟ್ಯಾಂಡ್‌ಗಳು, 50 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ವಿತರಣೆ ಮಾಡಲಾಗುವುದು ಎಂದು ಚಲಪತಿ ತಿಳಿಸಿದರು.