

ಸಚಿವ ಕೆಎನ್ಆರ್ ವಿವಾದಾತ್ಮಕ ಹೇಳಿಕೆ
ತುಮಕೂರು: "ಲೋಕಾಯುಕ್ತಕ್ಕೆ ಹೋಗೋದು ಒಂದೇ, ಸ್ಮಶಾನಕ್ಕೆ ಹೋಗೋ ಹೆಣಾನು ಒಂದೇ' ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿವಾವದಾತ್ಮಕ ಹೇಳಿಕೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರ ಸಚಿವ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ 3ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಬೆಳೆ ವಿಮೆ ಕುರಿತ ಪ್ರಗತಿ ಪರಿಶೀಲನೆ ವೇಳೆ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಅರ್ಹರೈತರಿಗೆ ಸಿಗುತ್ತೋ ಇಲ್ಲವೋ ಬೆಂಗಳೂರಿನಲ್ಲಿ ನೆಲೆಸಿರುವರೆಲ್ಲರು ಬೆಳೆ ವಿಮೆ ಪಡೆಯುತ್ತಿದ್ದು ಇದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಕೈವಾಡ ಇದೆ ಎಂಬುದನ್ನು ಪ್ರಸ್ತಾಪಿಸಿದರು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಯಸಂದ್ರ ಹೋಬಳಿ ಲಂಕೇನಹಳ್ಳಿ, ನರಿಗೇಹಳ್ಳಿಯಲ್ಲಿ ಬಗರ್ಹುಕುಂ ಸಮಿತಿಯಲ್ಲಿ ಮಂಜೂರು ಆಗಿಲ್ಲದಿದ್ದರು ಆರ್ಐ, ವಿಎಒಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರಿನಲ್ಲಿ ನೆಲೆಸಿರುವರಿಗೆ ಎಂಆರ್(ಖಾತೆ) ಮಾಡಿಕೊಟ್ಟಿದ್ದು ಇವರೆಲ್ಲರು ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಅದು ಅರಣ್ಯಪ್ರದೇಶವಾಗಿದ್ದು ಈ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗು ದೂರು ಕೊಟ್ಟಿದ್ದರು ಏನು ಪ್ರಯೋಜನವಾಗಲಿಲ್ಲ. ಹಾಗಾಗಿ, ಲೋಕಾಯುಕ್ತಕ್ಕೆಶಿಫಾರಸು ಮಾಡಿ ತನಿಖೆ ನಡೆಸುವಂತೆ ಒತ್ತಾಯಮಾಡಿದರು.
ಈ ವೇಳೆ ಸಚಿವ ರಾಜಣ್ಣ "ಲೋಕಾಯುಕ್ತಕ್ಕೆ ಹೋಗೋದು ಒಂದೇ, ಸ್ಮಶಾನಕ್ಕೆ ಹೋಗೋ ಹೆಣಾನು ಒಂದೇ' ಅದು ವಾಪಸ್ ಬರೋದಿಲ್ಲ, ಇದು ವಾಪಸ್ ಬರೋದಿಲ್ಲ. ಜಿಲ್ಲಾಧಿಕಾರಿಗಳೇ ಈ ದೂರನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಸರ್ಕಾರಿ ಜಮೀನು ವಾಪಸ್ ಪಡೆಯಬೇಕು ಎಂದು ಸಲಹೆನೀಡಿದರು.