ಊರೊಳಗೆ ಕರ್ಕೊಂಡೋಗಿ ಕಟ್ಟಿಹಾಕಬೇಕು: ಸಚಿವ ರಾಜಣ್ಣ

KNR_Officer
Published on

ತುಮಕೂರು: ಜಿಲ್ಲೆಯಲ್ಲಿ ಯಾವ ಗ್ರಾಮದಲ್ಲಿಯೂ ಕುಡಿಯವ ನೀರಿಗೆ ಸಮಸ್ಯೆಯಿಲ್ಲ ಎಂದು ಜಿಪಂ ಅಧಿಕಾರಿಗಳ ಉತ್ತರಕ್ಕೆ ಸಿಟ್ಟಾದ ಶಾಸಕ ಎಂ.ಟಿ.ಕೃಷ್ಣಪ್ಪ ತುರುವೇಕೆರೆ ತಾಪಂ ಇಒ ಸತೀಶ್‌ಕುಮಾರ್‌ಗೆ ತರಾಟೆಗೆ ತೆಗೆದುಕೊಂಡರು. ಈ ವೇಳೆ ಅಧಿಕಾರಿಗಳಿಗೆ ಮೀಟಿಂಗ್‌ನಲ್ಲಿ ಏನು ಹೇಳಿದರೂ ಪ್ರಯೋಜನವಿಲ್ಲ, ಊರೊಳಗೆ ಕರ್ಕೊಂಡೋಗಿ ಕಟ್ಟಿಹಾಕಬೇಕು. ಯಾವ ಊರಲ್ಲಿ ನೀರಿಲ್ಲ, ನೀರು ಒದಗಿಸಲು ಕ್ರಮ ಕೈಗೊಂಡಿದ್ದೀರಾ ಹೇಳಿ ಅಂದ್ರೆ ಕಥೆ ಹೇಳ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಗುಡುಗಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ ತುರುವೇಕೆರೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಮಾಹಿತಿಯನ್ನು ಒದಗಿಸಲು ಪರದಾಡಿದ ತುರುವೇಕೆರೆ ತಾಪಂ ಇಒ ಅವರನ್ನು ಸಚಿವ, ಶಾಸಕರು ತರಾಟೆಗೆ ತೆಗೆದುಕೊಂಡ ಪರಿ ಇದು. ತಾಲೂಕಿನ ಎರಡು ಹಳ್ಳಿಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದರಿಂದ ಕೋಪಗೊಂಡ ಶಾಸಕರು ನೀವು ಹಳ್ಳಿಗೆ ಹೋಗ್ತೀರೇನ್ರಿ ಎಂದು ಹರಿಹಾಯ್ದರು.

ರೀ ಸರ್ಕಾರ ನಿಮ್ಗೆಲ್ಲ ಜೀಪು, ಕಾರು ಕೊಟ್ಟಿದೆ, ಹಳ್ಳಿಗಳಿಗೆ ಹೋಗ್ರೀ,, ಹಳ್ಳಿ ಜನ ಕುಡಿಯೋಕೆ ನೀರಿಲ್ಲ ಅಂತ ಸಾಯ್ಬೇಕಾ? ನೀನು ಹಳ್ಳಿಗೆ ಹೋಗಲ್ಲ ಆಫೀಸ್‌ನಲ್ಲಿ ಕುಂತ್ಕೊಂತೀಯಾ ಗದರಿದರು. ಸಿಇಒಗೆ ಒಂದು ಲೆಕ್ಕ, ನಮಗೆ ಒಂದು ಲೆಕ್ಕ ಹೇಳ್ತೀರಾ? ಶಾಸಕರಿಗೆ ಸಮಸ್ಯೆ ಗೊತ್ತಿದೆ, ಶಾಸಕರು ಹೇಳ್ತಾರೆ ಕೇಳಿ? ಕುಡಿಯುವ ನೀರನ್ನು ಎಲ್ಲಿಂದ ಪೂರೈಸುತ್ತಿದ್ದಾರೆ ಹೇಳು? ಗೊಲ್ಲರಹಟ್ಟಿಯಲ್ಲಿ ಹುಟ್ಟಿದ್ದರೆ ನಿನಗೆ ಗೊತ್ತಾಗೋದು, ಕೊಳವೆಬಾವಿ ಕೊರೆಸೋಕೆ ಏನ್ರೀ ನಿಮಗೆ ರೋಗ ಎಂದರು.

15ನೇ ಹಣಕಾಸು ಹಣಕಾಸು ಆಯೋಗದ ಅನುದಾನ ಬಳಸಿಕೊಂಡು ಕುಡಿಯುವ ನೀರಿಗೆ ಕೊಳಗೆ ಬಾವಿಗೆ ಅವಕಾಶವಿದೆ. ಟಾಸ್ಕ್‌ಪೋರ್ಸ್ ಸಭೆ ನಡೆಸಬೇಕು, ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕೆಲಸ ಮಾಡುವಂತೆ ಸಚಿವ ಡಾ.ಜಿ.ಪರಮೇಶ್ವರ ಈ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 15 ಲಕ್ಷ ರೂ., ಅನುದಾನ ನೀಡಲಾಗಿದ್ದು, ಹೆಚ್ಚುವರಿ ಅನುದಾನ ಅಗತ್ಯಬಿದ್ದರೆ ಬಿಡುಗಡೆ ಮಾಡುವುದಾಗಿ ಸಚಿವರೇ ತಿಳಿಸಿದ್ದಾರೆ ಎಂದು ಜಿಪಂ ಸಿಇಒ ಜಿ.ಪ್ರಭು ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net