ಅಂಬಿಗರ ಚೌಡಯ್ಯ ಐಕ್ಯ ಸ್ಥಳ ಅಭಿವೃದ್ಧಿಗೆ ಸಮಿತಿ ರಚನೆ:ಸಚಿವ ಎಚ್​.ಕೆ.ಪಾಟೀಲ್​ ಭರವಸೆ

H K Patil_
Published on

ಬೆಂಗಳೂರು: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಕಾಯಕ ಕ್ಷೇತ್ರ, ಐಕ್ಯ ಸ್ಥಳ ಅಭಿವೃದ್ಧಿಗೆ ಎದುರಾಗಿರುವ ತಾಂತ್ರಿಕ ಅಡ್ಡಿ ನಿವಾರಣೆಗೆ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಸಚಿವ ಎಚ್​.ಕೆ. ಪಾಟೀಲ್​ ಹೇಳಿದರು.

ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ತಿಪ್ಪಣ್ಣಪ್ಪ ಕಮಕನೂರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಚೌಡಯ್ಯದಾನಪುರದಲ್ಲಿ ಶ್ರೀ ಮುಕ್ತಿನಾಥೇಶ್ವರ ದೇವಾಲಯವು ರಾಷ್ಟ್ರೀಯ ಸಂರಕ್ಷಿತ ಸ್ಮಾರಕವಾಗಿದೆ. ಇದು ಕೇಂದ್ರ ಸಂಸ್ಕೃತಿ ಮಂತ್ರಾಲಯದ ಅಧೀನದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವ್ಯಾಪ್ತಿಯಲ್ಲಿದೆ. ಈ ದೇವಾಲಯದ 15 ಮೀಟರ್​ ದೂರದಲ್ಲಿ ಅಂಬಿಗರ ಚೌಡಯ್ಯ ಸಮಾಧಿ ಇದೆ. ಈ ಜಾಗವೂ ಸಹ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ಪ್ರದೇಶವಾಗಿದೆ. ಹಾಗಾಗಿ, ಅಂಬಿಗರ ಚೌಡಯ್ಯ ಐಕ್ಯ ಸ್ಥಳ ಅಭಿವೃದ್ಧಿಗೆ ತೊಂದರೆಯಾಗಿದೆ ಎಂದರು.

ಈ ವಿಚಾರ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್​ಐ) ಗಮನಕ್ಕೆ ತರಲು ಸಮಿತಿ ರಚಿಸಿ ಶಾಸಕರು ಅಧ್ಯಕ್ಷರನ್ನಾಗಿ ಮತ್ತು ಅಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡುತ್ತೇನೆ. 2 ತಿಂಗಳದೊಳಗೆ ನಾವೆಲ್ಲರೂ ಸೇರಿ ಎಎಸ್​ಐ ಮೇಲೆ ಒತ್ತಡ ತಂದು ತಾಂತ್ರಿಕ ಸಮಸ್ಯೆ ನಿವಾರಿಸೋಣ ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net